×
Ad

ಉಡುಪಿ: ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಲು ಜನಪ್ರತಿನಿಧಿಗಳು ಪ್ರಯತ್ನಿಸಲಿ; ಕರಾವಳಿ ಯೂತ್ ಕ್ಲಬ್ ಒತ್ತಾಯ

Update: 2019-09-20 19:52 IST

ಉಡುಪಿ, ಸೆ.20: ಉಡುಪಿ ಜಿಲ್ಲೆಯ ಸ್ಥಾನಮಾನ ಪಡೆದು 22 ವರ್ಷಗಳು ಸಂದರೂ, ಇಲ್ಲಿ ಸುಸಜ್ಜಿತ ಜಿಲ್ಲಾಸ್ಪತ್ರೆಯೊಂದು ನಿರ್ಮಾಣಗೊಳ್ಳದೇ ಜನರು ಸಂಕಷ್ಟಪಡುವಂತಾಗಿದೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಪ್ರಯತ್ನಿಸಿ, ಒಕ್ಕೊರಲ ಬೇಡಿಕೆ ಸಲ್ಲಿಸಿದರೆ ಇದು ಖಂಡಿತ ಸಾಧ್ಯವಿದೆ ಎಂದು ಜಿಲ್ಲೆಯ ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.

ಶುಕ್ರವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಅನೇಕ ವರ್ಷಗಳಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಅಭಿವೃದ್ಧಿ ಕಾರ್ಯ ಗಳು ಕುಂಠಿತಗೊಂಡಿದ್ದು, ಇನ್ನೊಬ್ಬರ ಮೇಲೆ ಬೊಟ್ಟು ಮಾಡಲಾಗುತ್ತಿದೆ. ಆದರೆ ಈ ಬಾರಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು, ಸ್ಥಳೀಯ ಶಾಸಕರು, ಸಂಸದರು ಆಸ್ಪತ್ರೆಯ ಮೇಲ್ದರ್ಜೆಗಾಗಿ ಒಕ್ಕೊರಲಿನಿಂದ ಬೇಡಿಕೆ ಸಲ್ಲಿಸಲಿ ಎಂದವರು ಆಗ್ರಹಿಸಿದರು.

ಹಿಂದೆ ಹಲವು ಬಾರಿ ಆಸ್ಪತ್ರೆ ಭೇಟಿ ನೀಡಿದ ರಾಜ್ಯ ಸಚಿವರು ಈ ಆಸ್ಪತ್ರೆ ಯನ್ನು 250 ಬೆಡ್‌ನ ಜಿಲ್ಲಾಸ್ಪತ್ರೆಯಾಗಿ ಘೋಷಣೆ ಮಾಡಿದ್ದರು. 2017ರಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆಸ್ಪತ್ರೆ ಮೇಲ್ದರ್ಜೆಗೇರಿದೆ ಎಂದು ಘೋಷಣೆ ಸಹ ಮಾಡಿದ್ದರು. ಆದರೆ ಇಲ್ಲಿ ಸಮಸ್ಯೆ ಮಾತ್ರ ಪರಿಹಾರ ಕಂಡಿಲ್ಲ. ಹಿಂದೆ 124 ಬೆಡ್‌ಗಳ ತಾಲೂಕು ಆಸ್ಪತ್ರೆಯಾಗಿದ್ದ ಇದು ಈಗಲೂ ಹಾಗೆಯೇ ಇದೆ. ಈ ಬಗ್ಗೆ ಕೇಳಿದರೆ ಸರಕಾರದಿಂದ ಅನುದಾನ ಬರಲ್ಲ ಎಂದು ಒಂದು, ಇನ್ನೊಂದು ಸರಕಾರದತ್ತ ಬೊಟ್ಟು ಮಾಡುವ ಕೆಲಸ ನಿರಂತರವಾಗಿ ನಡೆದಿದೆ ಎಂದವರು ಬೇಸರದಿಂದ ನುಡಿದರು.

ಜಿಲ್ಲಾಸ್ಪತ್ರೆಯಲ್ಲಿ ಪ್ರತಿದಿನ 600 ಹೊರರೋಗಿಗಳು ಹಾಗೂ 150ಕ್ಕೂ ಅಧಿಕ ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ 17 ವೈದ್ಯರು, 25ಕ್ಕೂ ಅಧಿಕ ದಾದಿಯರು, 30 ಗ್ರೂಪ್ ಡಿ ನೌಕರರ ಕೊರತೆ ಇದೆ. ಇಲ್ಲಿ ಆಸ್ಪತ್ರೆಯನ್ನು ಈ ಬಗ್ಗೆ ದೂರುವಂತಿಲ್ಲ. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಆರೋಗ್ಯ ಕ್ಷೇತ್ರದಲ್ಲಿ ದೇಶಕ್ಕೇ ಅಗ್ರಸ್ಥಾನದಲ್ಲಿದ್ದು ಮಾದರಿ ಎನಿಸಿಕೊಂಡಿರುವ ಉಡುಪಿ, ಸುಸಜ್ಜಿತ, ಸರ್ವ ಸೌಲಭ್ಯಳಿಂದ ಕೂಡಿದ ಜಿಲ್ಲಾಸ್ಪತ್ರೆಯ ಕೊರತೆಯನ್ನು ಎದುರಿಸುತ್ತಿದೆ ಎಂದವರು ಅಭಿಪ್ರಾಯಪಟ್ಟರು.

ಜಿಲ್ಲಾಸ್ಪತ್ರೆಯ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರ ಗಮನಕ್ಕೂ ತಂದಿದ್ದೇವೆ. ಈ ತಿಂಗಳ ಅಂತ್ಯಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಜಿಲ್ಲೆಗೆ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಲಿದ್ದು, ಆ ಸಂದರ್ಭ ಜಿಲ್ಲಾಸ್ಪತ್ರೆಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಮನವಿ ಅರ್ಪಿಸಲಾಗುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಕೂಡಾ ಹೆಚ್ಚಿನ ಸಂಖ್ಯೆ ಯಲ್ಲಿ ನಮ್ಮೆಂದಿಗೆ ಕೈಜೋಡಿಸುವಂತೆ ಕರಾವಳಿ ಯೂತ್ ಕ್ಲಬ್‌ನ ಗೌರವಾಧ್ಯಕ್ಷ ರಮೇಶ್ ಕಲ್ಲೊಟ್ಟೆ ತಿಳಿಸಿದರು.

ತಮ್ಮ ಪ್ರಮುಖ ಬೇಡಿಕೆಗಳಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿ ಸುವುದು, ತುರ್ತು ಚಿಕಿತ್ಸೆಗೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಹಾಗೂ ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಕಟ್ಟಡ, ಸಿಬ್ಬಂದಿಗಳು ಮತ್ತಿತರ ಸೌಲಭ್ಯಗಳನ್ನು ಮಂಜೂರು ಮಾಡುವುದು ಸೇರಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕರಾವಳಿ ಯೂತ್ ಕ್ಲಬ್‌ನ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ಸಂದೇಶ್ ಶೆಟ್ಟಿ, ಸುಕೇಶ್ ಶೆಟ್ಟಿ, ರಾಮಾಂಜಿ, ಶೈಲೇಶ್ ಕುಂದರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News