ಮಠಗಳಿಗೆ ಸರಕಾರಿ ಹಾಸ್ಟೆಲ್‌ಗಳ ನಿರ್ವಹಣೆ ವಹಿಸಲು ಚಿಂತನೆ: ಸಚಿವ ಕೋಟ

Update: 2019-09-20 14:31 GMT

ಉಡುಪಿ, ಸೆ.20: ಕರಾವಳಿಯಲ್ಲಿ ಮಠ, ಮಂದಿರಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿವೆ. ಶಾಲೆಗಳನ್ನು ವ್ಯವಸ್ಥಿತವಾಗಿ ನಡೆಸುತ್ತಿವೆ. ಹೀಗಾಗಿ ಇನ್ನು ಮುಂದೆ ಸರಕಾರಿ ಹಾಸ್ಟೆಲ್‌ಗಳ ನಿರ್ವಹಣೆಯನ್ನು ಮಠಗಳಿಗೆ ಒಪ್ಪಿಸಿದರೆ ಅನುಕೂಲವಾಗಲಿದೆ ಎಂಬ ಚಿಂತನೆ ನಡೆಯುತ್ತಿದೆ. ಇದರ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ರಾಜ್ಯ ಮುಜರಾಯಿ, ಬಂದರು ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ಹಾಗೂ ಉಡುಪಿ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಜಂಟಿ ಆಶ್ರಯದಲ್ಲಿ ಸಂಸ್ಥೆಯ ಪ್ರಜ್ಞಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಂಗಳೂರು ವಿವಿ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಚೆಸ್ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು.

ರಾಜ್ಯದಲ್ಲಿ ಅನೇಕ ಮಠಗಳು ಶಿಕ್ಷಣಕ್ಕೆ ಒತ್ತು ನೀಡುತ್ತಿವೆ. ಇಲ್ಲಿ ಜಾತಿ, ಧರ್ಮ ಮೀರಿ ವ್ಯಕಿತ್ವ ರೂಪುಗೊಳ್ಳುತ್ತಿದೆ. ಅದಮಾರು ಮಠದ ಶಿಕ್ಷಣ ಸಂಸ್ಥೆಗಳು ಉತ್ತಮ ಶೈಕ್ಷಣಿಕ ಸಾದನೆಗಳೊಂದಿಗೆ ದೇಶಾದ್ಯಂತ ಉತ್ತಮ ಹೆಸರು ಪಡೆದಿದೆ. ಚೆಸ್ ಬುದ್ದಿವಂತರ ಆಟವಾಗಿದ್ದು, ವಿದ್ಯಾರ್ಥಿಗಳು ಇದರಲ್ಲಿ ಪರಿಣಿತಿ ಪೆಯಬೇಕು ಎಂದು ಸಲಹೆ ನೀಡಿದರು.

ಎರಡು ದಿನಗಳ ಟೂರ್ನಿಯನ್ನು ಉದ್ಘಾಟಿಸಿದ ಅದಮಾರು ಮಠಾಧೀಶರೂ, ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರೂ ಆದ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ಮಾತನಾಡಿ, ದೇಹಕ್ಕೆ ಕೆಲಸಕ್ಕೆ ನೀಡದಿದ್ದರೆ ಕಾಯಿಲೆ ಬರುತ್ತದೆ. ಮನಸ್ಸಿಗೆ ಕೆಲಸ ನೀಡದಿದ್ದರೆ ತುಕ್ಕುಹಿಡಿಯುತ್ತದೆ. ದೇಹ ಆರೋಗ್ಯವಾಗಿದ್ದರೂ ಮನಸ್ಸು ಹಾಳಾಗಿದ್ದರೆ ಉಪಯೋಗವಿಲ್ಲ. ಹೀಗಾಗಿ ಮನಸ್ಸಿನ ಆರೋಗ್ಯಕ್ಕೆ ಚದುರಂಗ ಆಟ ಪೂರಕ. ವಿದ್ಯಾರ್ಥಿಗಳನ್ನು ಇದು ಚುರುಕುಗೊಳಿಸುತ್ತದೆ ಎಂದರು.

ಪಿಐಎಂನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಮತ್ತು ದಕ್ಷಿಣ ಕನ್ನಡ ಮೀನುಗಾರಿಕೆ ಒಕ್ಕೂಟಗಳ ಸಂಘದ ಅಧ್ಯಕ್ಷ ಯಶಪಾಲ್ ಸುವರ್ಣ, ಕಾಲೇಜಿನ ಗೌರವ ಕೋಶಾಧಿಕಾರಿ ಪ್ರದೀಪ್‌ಕುಮಾರ್, ಮಂಗಳೂರು ವಿವಿ ನಿರೀಕ್ಷಕ ಗಣೇಶ್ ಕೋಟ್ಯಾನ್, ಡೆರಿಕ ಚೆಸ್ ಸಂಸ್ಥೆಯ ಡೆರಿಕ್ ಪಿಂಟೊ ಉಪಸ್ಥಿತರಿದ್ದರು.

ಪಿಐಎಂ ನಿರ್ದೇಶಕ ಡಾ.ಭರತ್ ಸ್ವಾಗತಿಸಿ, ಡೀನ್ ಡಾ.ಸುರೇಶರಮಣ ಮಯ್ಯ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ಹಾಗೂ ಡಾ.ಭಾರತಿ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ವಿವಿಗೆ ಸೇರಿದ ಸುಮಾರು 70 ಕಾಲೇಜು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದು, ಶನಿವಾರ ಸಂಜೆ 4:30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಇದರಲ್ಲಿ ಮಂಗಳೂರು ವಿವಿ ಉಪಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್‌ಕುಮಾರ್ ಮುಂತಾದವರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News