ಸಚಿವ ಈಶ್ವರಪ್ಪ ವಜಾಕ್ಕೆ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ಆಗ್ರಹ

Update: 2019-09-20 15:18 GMT

ಮಂಗಳೂರು, ಸೆ.20: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಸಭೆಯೊಂದರಲ್ಲಿ ಮುಸ್ಲಿಂ ಸಮುದಾಯವನ್ನು ನಿಂದಿಸಿದ್ದಲ್ಲದೆ, ಕೋಮುಭಾವನೆ ಬಿತ್ತುವ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರನ್ನು ಕೂಡಲೇ ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿಯು ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದೆ.

‘ಬಿಜೆಪಿಗೆ ಓಟು ಹಾಕದ ಮುಸಲ್ಮಾನರೆಲ್ಲ ಪಾಕಿಸ್ತಾನಿಯರು, ದೇಶದ್ರೋಹಿಗಳು, ತಾನು ಯಾವುದೇ ವಿಧದಲ್ಲಿ ಮುಸ್ಲಿಮರ ಓಟು ಕೇಳಿಲ್ಲ. ಹಾಗೆ ಮುಸ್ಲಿಮರ ಓಟು ಪಡೆದು ಚುನಾಯಿತರಾದ ಶಾಸಕರೆಲ್ಲರೂ ದೇಶದ್ರೋಹಿಗಳು’ ಎಂದು ಆರೋಪಿಸಿದ್ದ ಸಚಿವರು, ಧರ್ಮಗಳು ಹಾಗೂ ಜನರ ನಡುವೆ ದ್ವೇಷ ಬಿತ್ತಿದ್ದಲ್ಲದೆ, ತಾನು ಈ ಹಿಂದಿನ ಚುನಾವಣೆಗಳಲ್ಲಿ ಧರ್ಮದ ಆಧಾರಿತ ಓಟು ಪಡೆದು ಗೆದ್ದಿದ್ದೇನೆ. ಮುಂದಕ್ಕೂ ಧರ್ಮದ ಆಧಾರದಲ್ಲೇ ಓಟು ಪಡೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಅಲ್ಪಸಂಖ್ಯಾತರ ಸಮಿತಿ ಅಧ್ಯಕ್ಷ ಎನ್.ಎಸ್. ಕರೀಂ, ಮುಹಮ್ಮದ್ ಮಲಾರ್ ಮೋನು, ಜಿಪಂ ಸದಸ್ಯರಾದ ಎಂ.ಎಸ್. ಮುಹಮ್ಮದ್, ಕೆ.ಕೆ. ಶಾಹುಲ್ ಹಮೀದ್, ಮನಪಾ ಸದಸ್ಯ ಮುಹಮ್ಮದ್ ರವೂಫ್, ನಗರಸಭೆ ಉಳ್ಳಾಲ ಸದಸ್ಯ ಮುಹಮ್ಮದ್ ಉಳ್ಳಾಲ, ಸಲೀಂ, ಅಹ್ಮದ್ ಬಾವ ಬಜಾಲ್, ಸಿ.ಎಂ. ಮುಸ್ತಫ, ಅಬ್ದುಲ್ಲಾ, ಖಾದರ್ ಬಜ್ಪೆ, ಎಸ್.ಶಬ್ಬೀರ್, ಮುಹಮ್ಮದ್ ಬಪ್ಪಳಿಗೆ, ಇಕ್ಬಾಲ್ ಸಾಮಣಿಗೆ, ಯೂಸುಫ್ ಉಚ್ಚಿಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News