ಪ್ರಜಾಪ್ರಭುತ್ವ ಬಲಿಷ್ಠಗೊಳ್ಳುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಜಸ್ಟೀಸ್ ಎ.ವಿ.ಚಂದ್ರಶೇಖರ್

Update: 2019-09-20 15:58 GMT

ಉಡುಪಿ, ಸೆ.20:ದೇಶದ ಪ್ರಜಾಪ್ರಭುತ್ವ ಬಲಿಷ್ಠಗೊಳ್ಳುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದಿದೆ. ಅದೇ ರೀತಿ ನ್ಯಾಯಾಂಗವನ್ನು ಸದೃಢಗೊಳಿಸುವಲ್ಲಿ ನ್ಯಾಯವಾದಿಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರೂ, ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯ ನಿವೃತ್ತ ಸದಸ್ಯರೂ ಆದ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅಭಿಪ್ರಾಯ ಪಟ್ಟಿದ್ದಾರೆ.

ಉಡುಪಿ ವಕೀಲರ ಸಂಘದ ವತಿಯಿಂದ ವಕೀಲರ ಸಂಘದ ಆವರಣದಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು 'ಪರಿಣಾಮಕಾರಿ ವಕಾಲತ್ತು: ನೈಪುಣ್ಯತೆ ಮತ್ತು ತಂತ್ರಗಳು' ಎಂಬ ವಿಷಯದ ಕುರಿತು ಯುವ ವಕೀಲರನ್ನುದ್ದೇಶಿಸಿ ಮಾತನಾಡುತಿದ್ದರು.

ಇಂದು ನ್ಯಾಯಾಂಗ ಸೇವೆಗೆ ಉತ್ತಮ ಅವಕಾಶಗಳಿವೆ. ನಿಮ್ಮ ಕಕ್ಷಿದಾರನ ಪರವಾಗಿ ಉತ್ತಮವಾಗಿ ವಾದ ಮಾಡಿ. ಆದರೆ ಉತ್ತಮ ವಕಾಲತಿಗೆ ಅಡ್ಡದಾರಿಗಳಿಲ್ಲ. ಮಧ್ಯರಾತ್ರಿ ಹಣತೆ ಬೆಳಕು ಆರುವ ತನಕ ಕೆಲಸ ಮಾಡಿದರೆ (ಕೇಸಿನ ಅಧ್ಯಯನ) ನೀವೊಬ್ಬ ಉತ್ತಮ, ಯಶಸ್ವಿ ನ್ಯಾಯವಾದಿ ಎನಿಸಿಕೊಳ್ಳ ಬಹುದು ಎಂದವರು ನುಡಿದರು.

ಅದೇ ರೀತಿ ಒಳ್ಳೆಯ ವಕೀಲರನ್ನು ಬೆಳೆಸುವ ಜವಾಬ್ದಾರಿಯೂ ನ್ಯಾಯಾಧೀಶರ ಮೇಲೆ ಇರುತ್ತದೆ. ಒಬ್ಬ ಒಳ್ಳೆಯ ವಕೀಲ, ಉತ್ತಮ ನ್ಯಾಯಾಧೀಶರೂ ಆಗುತ್ತಾರೆ ಎಂದು ಉಡುಪಿ ಜಿಲ್ಲೆಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಜನಪ್ರಿಯರಾದ ಚಂದ್ರಶೇಖರ್ ನುಡಿದರು.

ನ್ಯಾಯಾಧೀಶರಿಗೆ ತೀರ್ಪು ಬರೆಯುವುದು ಒಂದು ಕಲೆ. ಇದೊಂದು ನಿರಂತರ ಪ್ರಕ್ರಿಯೆಯಲ್ಲಿ ಬರುವಂತಾದ್ದು. ಒಂದು ಹಿಸ್ಸೆ ದಾವೆಯ ತೀರ್ಪು ಬರೆಯಲು ಹಲವು ಕಾನೂನುಗಳ ಅರಿವಿರಬೇಕು. ಇದಕ್ಕಾಗಿ ಕಾನೂನಿನ ಸುಧೀರ್ಘ ಅಧ್ಯಯನ ಮಾಡಿರಬೇಕು. ಈ ನೈಪುಣ್ಯತೆ, ಕೌಶಲ್ಯ ಒಂದೆರಡು ದಿನಗಳಲ್ಲಿ ಬರುವುದಿಲ್ಲ. ನ್ಯಾಯಾಧೀಶನೊಬ್ಬ ಧರ್ಮದ ಒರೆಹಚ್ಚಿ ನ್ಯಾಯದ ಚೌಕಟ್ಟಿನಲ್ಲಿ ತೀರ್ಪು ನೀಡಬೇಕು ಎಂದು ಎ.ವಿ.ಚಂದ್ರಶೇಖರ್, ವಿದ್ಯಾರ್ಥಿಗಳಿಗೆ, ಯುವ ವಕೀಲರಿಗೆ ಕಿವಿಮಾತು ಹೇಳಿದರು.

ನ್ಯಾಯಧೀಶರಿಗೆ ಹಾಗೂ ನ್ಯಾಯವಾದಿಗೆ ಸಮಾಜದ ಪರಿಚಯ ಚೆನ್ನಾಗಿರ ಬೇಕು. ಸತ್ಯಶೋಧನೆ ನಡೆಸುವ ನಿರಂತರ ಪ್ರಯತ್ನವನ್ನು ಅವರು ಮಾಡಬೇಕು. ಇಬ್ಬರ ಕಡೆಯಿಂದಲೂ ತಪ್ಪುಗಳಾಗಬಹುದು, ಆದರೆ ಪ್ರಮಾದವಾಗದಂತೆ ಎಚ್ಚರವನ್ನು ವಹಿಸಬೇಕು. ಯಾವತ್ತೂ ಅವಿಡೆನ್ಸ್ ಆ್ಯಕ್ಟ್ ನಿಮ್ಮ ಕೈಯಲ್ಲಿರಬೇಕು ಎಂದೂ ಅವರು ಹೇಳಿದರು.

ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಎಂ.ಜೋಷಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿವೇಕಾನಂದ ಪಂಡಿತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ನಿರಂಜನ್ ಹೆಗ್ಡೆ ಹಾಗೂ ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸನತ್‌ಕುಮಾರ್ ಜೈನ್ ಉಪಸ್ಥಿತರಿದ್ದರು.

ಉಡುಪಿ ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ಸಂಘದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅತಿಥಿಗಳನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್‌ಕುಮಾರ್ ವಂದಿಸಿದರೆ, ವಕೀಲರಾದ ರಾಜಶೇಖರ ಶಾಮರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News