ಸಣ್ಣ ಪ್ರಮಾಣದ ಮಾಲಿನ್ಯದ ಪರಿಣಾಮ ಇಡೀ ವಿಶ್ವದ ವ್ಯವಸ್ಥೆ ಮೇಲೆ: ಹಿರಿಯ ಭೂವಿಜ್ಞಾನಿ ಡಾ.ರಘು ಮುರ್ತುಗುಡ್ಡೆ

Update: 2019-09-20 16:03 GMT

ಉಡುಪಿ, ಸೆ.20: 1980ರ ದಶಕದ ಬಳಿಕ ಜಾಗತಿಕ ತಾಪಮಾನ ಏರುಗತಿ ಯಲ್ಲಿ ಸಾಗುತ್ತಿದೆ. ಸಣ್ಣ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಮಾಡಿದರೂ ಅದರ ಪರಿಣಾಮ ಇಡೀ ವಿಶ್ವದ ವ್ಯವಸ್ಥೆ ಮೇಲೆ ಆಗುತ್ತದೆ ಎಂದು ಅಮೆರಿಕದ ಮೇರಿಲ್ಯಾಂಡ್ ವಿವಿಯ ಹಿರಿಯ ಭೂಜ್ಞಾನಿ ಡಾ.ರಘು ಮುರ್ತುಗುಡ್ಡೆ ಹೇಳಿದ್ದಾರೆ.

ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್, ಎಂಐಟಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು 'ಹವಾಮಾನ ಬದಲಾವಣೆ, ಸುಸ್ಥಿರತೆ ಮತ್ತು ಜಾಗತಿಕ ಸನ್ನಿವೇಶ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

1950ರ ಬಳಿಕ ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಅಂಶ ಏರುಪೇರು ಆಗುತ್ತಿದೆ. 1960ರ ಬಳಿಕ ಇದು ಏರುಗತಿಯಲ್ಲಿದೆ. ಭೂಮಿಯಲ್ಲಿ ಸಾಗರ ದಂತಹ ವ್ಯವಸ್ಥೆಗಳಿರುವುದರಿಂದ ಉತ್ಪಾದನೆಯಾಗುವ ವಿಷಾಂಶಗಳ ಪರಿಣಾಮಗಳು ಅಷ್ಟೊಂದು ಪರಿಣಾಮ ಬೀರುತ್ತಿಲ್ಲ ಎಂದರು.

ಸಕಾಲದಲ್ಲಿ ಮಳೆ ಬಾರದೆ ಇರುವುದು, ಮಳೆ ಬಂದರೂ ಒಂದೇ ಸಮನೆ ಬರುವುದು, ಒಂದು ಕಡೆ ಹೆಚ್ಚು ಮಳೆ ಬಂದರೆ, ಇನ್ನಾವುದೋ ಒಂದು ಕಡೆ ಕಡಿಮೆ ಮಳೆಯಾಗುವುದನ್ನು ನಾವು ಅನುಭಸುತ್ತಿದ್ದೇವೆ. ಬಹುತೇಕ ಎಲ್ಲ ದೇಶಗಳೂ ಪರಿಸರ ನಾಶವನ್ನು ನಿರ್ಲಕ್ಷಿಸಿವೆ. ಇದರಿಂದ ಒಟ್ಟಾರೆ ಮಾನವ ಸುರಕ್ಷಿತವಾಗಿಲ್ಲ. ಹವಾಮಾನ ಸಮಸ್ಯೆ ಮುಂದೊಂದು ದಿನ ಭಾರೀ ಅಪಾಯಗಳನ್ನು ಸೃಷ್ಟಿಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಹವಾಮಾನ ಬದಲಾವಣೆ ವಿಜ್ಞಾನಕ್ಕೆ ಸಂಬಂಧಿಸಿದೆಯಾದರೂ ಇದರ ಪರಿಣಾಮ ರಾಜಕೀಯ ಮತ್ತು ಸಾಮಾಜಿಕವಾಗಿರುತ್ತದೆ. ಇದು ಹಣಕಾಸಿನ ಮೇಲೂ ಪರಿಣಾಮ ಬೀರುತ್ತದೆ. ಗ್ರೀನ್‌ಹೌಸ್ ಪರಿಣಾಮ ಪ್ರಕೃತಿಯ ಮೇಲೂ ಆಗುತ್ತಿದೆ ಎಂದರು.

ಸುಮಾರು 4.5 ಬಿಲಿಯ ವರ್ಷಗಳ ಹಿಂದೆ ಭೂಮಿ ಅಸ್ತಿತ್ವಕ್ಕೆ ಬಂತು. ಇದರ ಮೇಲೆ ಜೀವವಿಕಸನದಲ್ಲಿ ಕೊನೆಯಲ್ಲಿ ಜನಿಸಿದ ತಳಿಯೇ ಮಾನವ. ಈಗ ಮಾನವ ಚಂದ್ರ, ಮಂಗಳನಲ್ಲಿ ಹೋಗಿರಬಹುದು. ಮಾನವ ಎಲ್ಲೆಲ್ಲಾ ಇದ್ದಾನೋ ಅಲ್ಲೆಲ್ಲಾ ದಬ್ಬಾಳಿಕೆ ನಡೆಸಿದ್ದಾನೆ. ಚಿಂತನೆ, ಕ್ರಿಯಾಶೀಲತೆಯ ಜತೆ ಪರಿಸರ ಹಾನಿಗೂ ಮಾನವ ಕಾರಣನಾಗುತ್ತಿದ್ದಾನೆ ಎಂದು ಮುರ್ತುಗುಡ್ಡೆ ನುಡಿದರು.

ಎಂಐಟಿ ಜಂಟಿ ನಿರ್ದೇಶಕ ಡಾ.ಬಿಎಚ್ ಪೈ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ನಿರ್ದೇಶಕ ವರದೇಶ ಹಿರೆಗಂಗೆ ಸ್ವಾಗತಿಸಿ ಶ್ರೀರಾಜ್ ಗುಡಿ ಪರಿಚಯಿಸಿದರು.

ಪರಿಸರ ಮಾಲಿನ್ಯದಲ್ಲಿ ಅಮೆರಿಕ ಅಗ್ರಸ್ಥಾನಿ
ಪರಿಸರ ಮಾಲಿನ್ಯದಲ್ಲಿ ಅಮೆರಿಕ, ಯೂರೋಪ್ ಮೊದಲ ಸ್ಥಾನದಲ್ಲಿವೆ. ಅಲ್ಲಿ ಪ್ರತಿಯೊಬ್ಬ ವರ್ಷಕ್ಕೆ 20 ಟನ್ ಪರಿಸರ ಮಾಲಿನ್ಯವನ್ನು ಹೊರ ಸೂಸುತ್ತಾನೆ. ಭಾರತದಲ್ಲಿ ತಲಾ 2 ಟನ್, ಚೀನಾದಲ್ಲಿ ತಲಾ 7.8 ಟನ್ ಇದೆ. ಭಾರತ ಮತ್ತು ಚೀನಾದಲ್ಲಿ ಜನಸಂಖ್ಯೆ ಹೆಚ್ಚಿಗೆ ಇರುವುದರಿಂದ ಕಾರ್ಬನ್ ಡೈ ಆಕೆ್ಸಡ್ ಹೊರಸೂಸುವಿಕೆ ಹೆಚ್ಚಿಗೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News