ಕಾಪು: ಚಿನ್ನಾಭರಣ ಕಳವು; ಆರೋಪಿ ಬಂಧನ

Update: 2019-09-20 17:09 GMT

ಕಾಪು: ಮಹಿಳೆಯೋರ್ವರು ಮನೆಯಲ್ಲಿದ್ದಾಗ ಮನೆಗೆ ನುಗ್ಗಿ ಕಪಾಟಿನಲ್ಲಿದ್ದ ಚಿನ್ನಾಭರಣ ಕಳವುಗೈದ ಘಟನೆಗೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಬಂಧಿತನನ್ನು ಕಾಪು  ಉಳಿಯರಗೋಳಿ ನಿವಾಸಿ ನಿಶಾಂತ್ ಎಸ್.ಕುಮಾರ್ (19 ವರ್ಷ) ಎಂದು ಗುರುತಿಸಲಾಗಿದೆ. ಬಂಧಿತನಿದ ವಶಪಡಿಸಿಕೊಂಡ ಸೊತ್ತುಗಳ ಒಟ್ಟು  ಮೌಲ್ಯ ಸುಮಾರು 2.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಕ್ಟೋಬರ್ 3ರವರೆಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. 

ಘಟನೆಯ ವಿವರ: ಸೆಪ್ಟಂಬರ್ 11ರಂದು ಸಂಜೆ 7.30ರ ವೇಳೆಗೆ ಶಂಕರ ಎಂಬವರು ಮನೆಯ ಕಪಾಟನ್ನು ತೆರೆದು ನೋಡಿದಾಗ ಒಳಗಡೆ ಇಟ್ಟಿದ್ದ ಸುಮಾರು 145.575 ಗ್ರಾಂ ತೂಕದ ಚಿನ್ನಾಭರಣಗಳು ಕಾಣೆಯಾಗಿದ್ದು, ಸುಮಾರು 2 ತಿಂಗಳಿನಿಂದ ಮನೆಯಲ್ಲಿ ತಾಯಿಯನ್ನು  ಬಿಟ್ಟು ಉಳಿದ ಎಲ್ಲರೂ ಕೆಲಸಕ್ಕೆ ಹೋದ ಸಮಯದಲ್ಲಿ ಯಾರೋ ಕಳ್ಳರು ಚಿನ್ನಾಭರಣವನ್ನು ಕಪಾಟಿನಿಂದ ಕೀ ಉಪಯೋಗಿಸಿ ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನಾಭರಣದ ಅಂದಾಜು ಮೌಲ್ಯ 4.80 ಲಕ್ಷ ರೂ ಎಂದು ಅಂದಾಜಿಸಲಾಗಿತ್ತು. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ತನಿಖೆಯನ್ನು ಪ್ರಾರಂಭಿಸಿದ ಕಾಪು ಪೊಲೀಸರು  ಸೆಪ್ಟಂಬರ್ 18ರಂದು ಕಾಪು ಬಸ್‍ನಿಲ್ದಾಣದ ಬಳಿ ಸಂಶಯಾಸ್ಪದ ವ್ಯಕ್ತಿಯು ಇದ್ದ ಬಗ್ಗೆ ಮಾಹಿತಿ ದೊರೆತಂತೆ ಆತನನ್ನು ವಶಕೆಪಡೆದುಕೊಂಡು ವಿಚಾರಿಸದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಚಿನ್ನ ಬದಲಿಸಿ ಅಡವು ಇಟ್ಟ: ಕಳವು ಮಾಡಿದ ಚಿನ್ನಾಭರಣಗಳಲ್ಲಿ ಕೆಲವು ಚಿನ್ನಾಭರಣಗಳನ್ನು ಬಂಗಾರದ ಮಳಿಗೆಗಳಲ್ಲಿ ಬದಲಿಸಿ ಬೇರೆ ಆಭರಣಗಳನ್ನು ಪಡೆದಿದ್ದು, ಅವುಗಳನ್ನು ಸಹಕಾರಿ ಬ್ಯಾಂಕ್‍ನಲ್ಲಿ ಅಡವು ಇಟ್ಟಿರುವುದಾಗಿ ಹಾಗೂ ಉಳಿದ ಚಿನ್ನಾಭರಣಗಳು ತನ್ನಲ್ಲಿಯೇ ಇದ್ದು, ಈ ದಿನ ಅವುಗಳನ್ನು ಉಡುಪಿ  ಕಡೆ  ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಆರೋಪಿ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.

ರೂ. 52,300 ಮೌಲ್ಯದ ಚಿನ್ನದ ಗಜಲಕ್ಷ್ಮಿಯ ಚಿತ್ರದ ಪೆಂಡೆಂಟ್ ಇರುವ ನೆಕ್ಲೇಸ್ ಸರ  -1,  ರೂ.  38,000 ಮೌಲ್ಯದ ಚಿನ್ನದ ರಾಣಿ ಎಲಿಜಬೆತ್‍ನ ಪೆಂಡೆಂಟ್ ಇರುವ  ರೋಪ್‍ಚೈನ್, 29,700 ಮೌಲ್ಯದ ಚಿನ್ನದ ಹವಳ ಕೂರಿಸಿದ ಅಗಲದ ಬಳೆ -1, 19ಸಾವಿರ ರೂ. ಮೌಲ್ಯದ ಚಿನ್ನದ ನವರತ್ನ  ಉಂಗುರ, ಚಿನ್ನದ ಕೆಂಪು ಕಲ್ಲು ಇರುವ ಬೆಂಡೋಲೆ, ಚಿನ್ನದ ಅಮೇರಿಕನ್ ಡೈಮಂಡ್‍ನ ಬೆಂಡೋಲೆ -1,  ಪದಕ  ಇರುವ ಮುತ್ತಿನ ಸರ - 1, ಚಿನ್ನದ ಸಿಂಗಲ್ ಬೆಂಡೋಲೆ -1, ಚಿನ್ನದ ಪೆಂಡೆಂಟ್ ಇರುವ  ಚೈನ್, ಚಿನ್ನದ  ಪವಿತ್ರ  ಉಂಗುರ  -1,  ಚಿನ್ನದ ಉಂಗುರ  -1, ವಶಪಡಿಸಿಕೊಳ್ಳಲಾಗಿದೆ. 

ಕಾರ್ಯಾಚರಣೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ  ನಿಶಾ ಜೇಮ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕೆ. ಕೃಷ್ಣಕಾಂತ್, ಸಹಾಯಕ ಪೊಲೀಸ್ ಅಧೀಕ್ಷಕರು ಕಾರ್ಕಳ ಉಪವಿಭಾಗರವರ ಮಾರ್ಗದರ್ಶನದಂತೆ ನಡೆಸಲಾಆಗಿತ್ತು. ಕಾಪು ಸಿಪಿಐ ನೇತೃತ್ವದ ತಂಡದಲ್ಲಿ ಕ್ರೈಂ ಪಿಎಸ್‍ಐ  ಜಯ ಕೆ., ಪಿಎಸ್‍ಐ ರಾಜಶೇಖರ, ಪ್ರೊಬೇಷನರಿ ಪಿ.ಸ್.ಐ. ಉದಯರವಿ, ಎ.ಎಸ್.ಐ. ಪ್ರದೀಪ್, ರಾಜೇಂದ್ರ ಮಣಿಯಾಣಿ ಹಾಗೂ ಸಿಬ್ಬಂದಿಯವರಾದ ಅಮೃತೇಶ್, ಮಹಾಬಲ, ರವಿಕುಮಾರ್, ಆನಂದ, ಸಂದೇಶ್ ಹಾಗೂ ನಾಗೇಶ್ ಭಾಗವಹಿಸಿರುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News