ಕಾಶ್ಮೀರದಲ್ಲಿ ಮಕ್ಕಳ ಬಂಧನ ಪ್ರಶ್ನಿಸಿ ಮನವಿ: ವರದಿ ಕೋರಿದ ಸುಪ್ರೀಂ ಕೋರ್ಟ್

Update: 2019-09-20 17:56 GMT

ಹೊಸದಿಲ್ಲಿ, ಸೆ. 20: ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ಆಗಸ್ಟ್ 5ರಂದು ರದ್ದುಗೊಳಿಸಿದ ಬಳಿಕ ವಿಧಿಸಲಾದ ನಿರ್ಬಂಧದ ಸಂದರ್ಭ ಕಾಶ್ಮೀರದಲ್ಲಿ ಮಕ್ಕಳನ್ನು ಬಂಧನದಲ್ಲಿ ಇರಿಸಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಮ್ಮು ಹಾಗೂ ಕಾಶ್ಮೀರ ಹೈಕೋರ್ಟ್‌ನಿಂದ ವರದಿ ಕೋರಿದೆ.

ಕಾಶ್ಮೀರದಲ್ಲಿ ಮಕ್ಕಳನ್ನು ಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿರುವ ಮಕ್ಕಳ ಹಕ್ಕು ಹೋರಾಟಗಾರರಾದ ಇನಾಕ್ಷಿ ಗಂಗೂಲಿ ಹಾಗೂ ಶಾಂತಾ ಸಿನ್ಹಾ ಅವರನ್ನು ಪ್ರತಿನಿಧಿಸಿದ ಹಿರಿಯ ನ್ಯಾಯವಾದಿ ಹುಝೈಫ ಅಹ್ಮದಿ, ಕಣಿವೆಯಲ್ಲಿನ ಜನರು ಹೈಕೋರ್ಟ್ ಅನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಸೆಪ್ಟಂಬರ್ 16ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.

ಅಪ್ರಾಪ್ತರಿಗೆ ಸಂಬಂಧಿಸಿದ ಗಮನಾರ್ಹ ವಿಷಯಗಳ ಬಗ್ಗೆ ಪ್ರಶ್ನೆ ಎತ್ತಿರುವುದರಿಂದ ಕಾಶ್ಮೀರದಲ್ಲಿ ಮಕ್ಕಳ ಬಂಧನ ಆರೋಪಿಸಿ ಸಲ್ಲಿಸಲಾದ ಮನವಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ತಿಳಿಸಿದೆ.

ಈ ವಿಷಯಕ್ಕೆ ಸಂಬಂಧಿಸಿ ಒಂದು ವಾರಗಳ ಒಳಗೆ ವರದಿ ಸಲ್ಲಿಸುವಂತೆ ಜಮ್ಮು ಹಾಗೂ ಕಾಶ್ಮೀರ ಹೈಕೋರ್ಟ್‌ನ ಬಾಲ ನ್ಯಾಯ ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ನಾವು ಜಮ್ಮು ಹಾಗೂ ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಿಂದ ವರದಿ ಸ್ವೀಕರಿಸಿರುವುದಾಗಿ ಕೂಡ ಸುಪ್ರೀಂ ಕೋರ್ಟ್ ತಿಳಿಸಿದೆ. ಆದರೆ, ಜನರಿಗೆ ಹೈಕೋರ್ಟ್ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂಬ ಪ್ರತಿಪಾದನೆಯನ್ನು ವರದಿ ಬೆಂಬಲಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನಿರ್ಬಂಧದ ಸಂದರ್ಭ ಕಾಶ್ಮೀರದ ಐವರು ನಾಗರಿಕರ ಬಂಧನವನ್ನು ಪ್ರಶ್ನಿಸಲಾದ ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಬಗ್ಗೆ ಜಮ್ಮು ಹಾಗೂ ಕಾಶ್ಮೀರ ಆಡಳಿತದಿಂದ ಪ್ರತಿಕ್ರಿಯೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News