ಜಿಎಸ್‌ಟಿ ಪರಿಷ್ಕರಣೆ: ಹೋಟೆಲ್ ರೂಮ್‌ಗಳು ಅಗ್ಗ, ಕೆಫೀನ್ ಒಳಗೊಂಡಿರುವ ಪಾನೀಯಗಳು ತುಟ್ಟಿ

Update: 2019-09-20 18:04 GMT

ಹೊಸದಿಲ್ಲಿ,ಸೆ.20: ಜಿಎಸ್‌ಟಿ ಮಂಡಳಿಯು ಶುಕ್ರವಾರ ಕೆಲವು ಸರಕುಗಳ ಮೇಲಿನ ತೆರಿಗೆಗಳನ್ನು ಪರಿಷ್ಕರಿಸಿದ್ದು ಕೆಫೀನ್ ಒಳಗೊಂಡಿರುವ ಪಾನೀಯಗಳ ಮೇಲಿನ ತೆರಿಗೆಯನ್ನು ಈಗಿನ ಶೇ.18ರಿಂದ ಶೇ.28ಕ್ಕೆ ಹೆಚ್ಚಿಸಲಾಗಿದೆ, ಜೊತೆಗೆ ಶೇ.12ರಷ್ಟು ಸೆಸ್ ಅನ್ನು ಹೆಚ್ಚುವರಿಯಾಗಿ ಹೇರಲಾಗಿದೆ.

 ಜಿಎಸ್‌ಟಿ ಸಭೆಯ ಬಳಿಕ ಸುದ್ದಿಗಾರರಿಗೆ ವಿವರಗಳನ್ನು ನೀಡಿದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾತ್ರಿಯೊಂದಕ್ಕೆ 1,000 ರೂ.ಗಿಂತ ಕಡಿಮೆ ಬಾಡಿಗೆಯ ಹೋಟೆಲ್ ಕೋಣೆಗಳ ಮೇಲೆ ಶೂನ್ಯ ತೆರಿಗೆಯನ್ನು ಪ್ರಕಟಿಸಿದರು. ಪ್ರತಿ ರಾತ್ರಿಗೆ 1000 ರೂ.ನಿಂದ 7,500 ರೂ.ಬಾಡಿಗೆಯ ಕೋಣೆಗಳಿಗೆ ತೆರಿಗೆಯನ್ನು ಈಗಿನ ಶೇ.18ರಿಂದ ಶೇ.12ಕ್ಕೆ ಮತ್ತು 7,500 ರೂ.ಗಿಂತ ಹೆಚ್ಚಿನ ಬಾಡಿಗೆಯ ಕೋಣೆಗಳಿಗೆ ಈಗಿನ ಶೇ.28ರಿಂದ ಶೇ.18ಕ್ಕೆ ಇಳಿಸಲಾಗಿದೆ. ಔಟ್‌ಡೋರ್ ಕೇಟರಿಂಗ್‌ನ ಮೇಲಿನ ತೆರಿಗೆಯನ್ನು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್‌ನೊಂದಿಗೆ ಈಗಿನ ಶೇ.18ರಿಂದ ಶೇ.5ಕ್ಕೆ ತಗ್ಗಿಸಲಾಗಿದೆ ಎಂದರು.

ಸಾಗರ ಇಂಧನಗಳ ಮೇಲಿನ ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಸಲಾಗಿದ್ದರೆ,ರೈಲ್ವೆ ವ್ಯಾಗನ್‌ಗಳು,ಬೋಗಿಗಳು,ಎಲ್ಲ ರೈಲ್ವೆ ಇಂಜಿನ್‌ಗಳು ಮತ್ತು ಕ್ಯಾರಿಯೇಜ್‌ಗಳಿಗೆ ತೆರಿಗೆಯನ್ನು ಶೇ.5ರಿಂದ ಶೇ.12ಕ್ಕೆ ಹೆಚ್ಚಿಸಲಾಗಿದೆ. ಭಾರತದಲ್ಲಿ ತಯಾರಾಗದ,ವಿದೇಶಗಳಿಂದ ಆಮದಾಗುವ ನಿರ್ದಿಷ್ಟ ರಕ್ಷಣಾ ಸರಕುಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ.

 ಪಾಲಿಎಥೆಲಿನ್ ಬ್ಯಾಗ್‌ಗಳಿಗೆ ಏಕರೂಪದ ಶೇ.12 ತೆರಿಗೆಯನ್ನು ನಿಗದಿಗೊಳಿಸಿದ್ದರೆ,10ರಿಂದ 13 ಜನರನ್ನು ಸಾಗಿಸುವ ಸಾಮರ್ಥ್ಯದ ಪೆಟ್ರೋಲ್ ವಾಹನಗಳ ಮೇಲಿನ ಗರಿಷ್ಠ ತೆರಿಗೆ ಶೇ.28ರ ಮೇಲಿನ ಸೆಸ್ ಅನ್ನು ಶೇ.1ಕ್ಕೆ ಮತ್ತು ಡೀಸೆಲ್ ವಾಹನಗಳಿಗೆ ಈ ಸೆಸ್ ಅನ್ನು ಶೇ.3ಕ್ಕೆ ಇಳಿಸಲಾಗಿದೆ.

ಪರಿಷ್ಕೃತ ತೆರಿಗೆ ದರಗಳು ಅ.1ರಿಂದ ಜಾರಿಗೊಳ್ಳಲಿವೆ ಎಂದು ಸೀತಾರಾಮನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News