ಸಾಮಾನ್ಯ ಕಾರ್ಯಕರ್ತನೊಬ್ಬ ರಾಷ್ಟ್ರಸ್ಥಾನಕ್ಕೇರಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ: ನಳಿನ್ ಕುಮಾರ್

Update: 2019-09-20 18:12 GMT

ಬಂಟ್ವಾಳ, ಸೆ. 10: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಸೇವ ಸಪ್ತಾಹದ ಅಂಗವಾಗಿ ಎ.ಜೆ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ಇಂದಿಗೆ 28 ದಿನಗಳಲ್ಲಿ 26 ಜಿಲ್ಲೆಗಳಿಗೆ ಪ್ರವಾಸಿ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಕಾರ್ಯಕರ್ತರನ್ನು ಪ್ರೇರೇಪಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

63 ಪಕ್ಷಗಳು ಜಾತಿ ಅಥವಾ ವಂಶಾಧಾರಿತವಾದ ಪಕ್ಷಗಳಾಗಿದ್ದು, ರಾಷ್ಟ್ರೀಯ ವಿಚಾರಧಾರೆ, ಕಾರ್ಯಬದ್ಧತೆಯಾಧಾರದಲ್ಲಿ ಸಂಘಟನಾ ಪಕ್ಷವೊಂದಿದ್ದರೆ ಅದು ಬಿಜೆಪಿ ಮಾತ್ರ ಎಂದರು.

ಬಿಜೆಪಿ ಬೇರೆ ಪಕ್ಷಕ್ಕಿಂತ ವಿಭಿನ್ನವಾಗಿದ್ದು, ಜಗತ್ತಿನಲ್ಲಿಯೇ ವಿಶಿಷ್ಟ ಸ್ಥಾನದೊಂದಿಗೆ ಗುರುತಿಸಲ್ಪಟ್ಟಿದೆ. ರಾ.ಸ್ವ.ಸೇ.ಸಂಘದ ಸಂಸ್ಕಾರ ಪಡೆದ ಸಾಮಾನ್ಯ ಕಾರ್ಯಕರ್ತನೊಬ್ಬ ರಾಷ್ಟ್ರಸ್ಥಾನಕ್ಕೇರಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದ ಅವರು, ಬಿಜೆಪಿ ಕಾರ್ಯಕರ್ತರು ದೇಶಕ್ಕಾಗಿ ದುಡಿಯವವರು ಎಂದು ಹೇಳಿದರು.

ಸೆ. 30ರೊಳಗಾಗಿ ಕ್ಷೇತ್ರದಲ್ಲಿ ಸದಸ್ಯತ್ವವನ್ನು ಹೆಚ್ಚಿಸುವುದರ ಜೊತೆಗೆ ಗ್ರಾಮ ಸಮಿತಿಯನ್ನು ರಚಿಸಿ ರಾಜ್ಯ ಸಮಿತಿಗೆ ವರದಿ ಸಲ್ಲಿಸುವಂತೆ ಸೂಚಿಸಿದ ಅವರು, ಕಾಶ್ಮೀರದಲ್ಲಿ 370ರ ವಿಧಿಯನ್ನು ರದ್ದುಗೊಳಿಸಲು ಬಿಜೆಪಿಗೆ ಬಹುಮತ ಸಿಗುವವರೆಗೆ ಕಾಯಬೇಕಾಯಿತು. ಮುಂದಿನ ದಿನದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗುವ ದಿನ ದೂರ ಇಲ್ಲ ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮಾತನಾಡಿ, ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಹಿರಿಯರು ಗುರುತಿಸುತ್ತಾರೆ ಎಂಬುದಕ್ಕೆ ನಳಿನ್ ಕುಮಾರ್ ಕಟೀಲ್ ಅವರೇ ಸಾಕ್ಷಿಯಾಗಿದ್ದಾರೆ. ಅವರು ಈ ಸಾಧನೆಯ ಹಿಂದೆ ಅಪಾರವಾದ ಶ್ರಮವಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಸಂಜೀವ ಮಠಂದೂರು ಮಾತನಾಡಿ, ಮುಂದಿನ ಆರು ತಿಂಗಳಲ್ಲಿ ಎದುರಾಗುವ ಗ್ರಾಮ ಪಂಚಾಯತ್ ಚುನಾವಣೆಗೆ ಕಾರ್ಯಕರ್ತರು ಈಗಿಂದೀಗಲೇ ಸಜ್ಜಾಗಬೇಕು. ಯಡಿಯೂರಪ್ಪ ಸರಕಾರ ಅಸ್ತಿತ್ವಕ್ಕೆ ಬಂದು ಸಚಿವರ ಆಯ್ಕೆಯಾದರೂ, ವಿಪಕ್ಷಗಳಿಗೆ ವಿಪಕ್ಷನಾಯಕನ ಆಯ್ಕೆ ನೇಮಕ ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದ ಅವರು, ಭ್ರಷ್ಟಾಚಾರಿಯನ್ನು ಪಕ್ಷದಿಂದ ಕಿತ್ತೊಗೆಯುವ ಬದಲು ಅವರಿಗೆ ಬೆಂಬಲವಾಗಿ ನಿಂತು ಪ್ರತಿಭಟನೆ ಮಾಡಿಸುವಂತ ಕೀಳುಮಟ್ಟದ ರಾಜಕಾರಣಕ್ಕೆ ವಿಪಕ್ಷ ಮುಂದಾಗಿರುವುದು ನಾಚಿಗೇಡಿನ ಸಂಗತಿ ಎಂದರು

ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವದಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಅಭಿನಂದನಾ ಭಾಷಣ ಮಾಡಿದರು.

ವೇದಿಕೆಯಲ್ಲಿ ವಿಭಾಗದ ಪ್ರಭಾರಿ ಉದಯಕುಮಾರ್ ಶೆಟ್ಟಿ ಉಡುಪಿ, ಮಾಜಿ ಶಾಸಕರಾದ ಎ.ರುಕ್ಮಯಪೂಜಾರಿ, ಪದ್ಮನಾಭಕೊಟ್ಟಾರಿ, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ. ಭಟ್, ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಪುತ್ತೂರು, ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಕ್ಯಾ.ಬ್ರಿಜೇಶ್ ಚೌಟ, ಕಿಶೋರ್ ರೈ, ಉಪಾಧ್ಯಕ್ಷ ಜಿ.ಆನಂದ, ಜಿಪಂ ಸದಸ್ಯ ತುಂಗಪ್ಪ ಬಂಗೇರ, ಎ.ಜೆ.ಆಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ.ಅರವಿಂದ್ ಉಪಸ್ಥಿತರಿದ್ದರು.

ಬಂಟ್ವಾಳ ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಸ್ವಾಗತಿಸಿದರು. ಉಪಾಧ್ಯಕ್ಷ ದೇವಪ್ಪ ಪೂಜಾರಿ ವಂದಿಸಿದರು.ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ ನಿರೂಪಿಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಸೇವಾ ಸಪ್ತಾಹದ ಪ್ರಯುಕ್ತ ಮಂಗಳೂರು ಎ.ಜೆ.ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರವು ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News