ಅಧ್ಯಕ್ಷ ಪಟ್ಟದ ಹಿಂದೆ ಪಕ್ಷ ಸಂಘಟಿಸುವ ಜವಾಬ್ದಾರಿ ಇದೆ: ನಳಿನ್ ಕುಮಾರ್ ಕಟೀಲ್

Update: 2019-09-20 18:23 GMT

ಉಳ್ಳಾಲ: ಬಿಜೆಪಿ ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದ 28ದಿನಗಳಲ್ಲಿ 26ಜಿಲ್ಲೆಗಳನ್ನು ದರ್ಶನ ಮಾಡಿ ಬಂದಿದ್ದೇನೆ.‌ ಇಂದು ಕಾರ್ಯಕರ್ತರು ನಮಗೆ ಹಾಕಿದ ಹಾರ ತುರಾಯಿಯಲ್ಲಿ ಉಸ್ತುವಾರಿ ಸಚಿವರ ಮುಂದೆ ಕ್ಷೇತ್ರದ ಜನರ ಹಲವು ಬೇಡಿಕೆ ಇದೆ. ರಾಜ್ಯಾಧ್ಯಕ್ಷರಿಗೆ ನಡೆದ ಸನ್ಮಾನದ ಹಿಂದೆ ಭಾರ ಇದೆ. ಅಧ್ಯಕ್ಷ ಪಟ್ಟದ ಹಿಂದೆ ಪಕ್ಷ ಸಂಘಟಿಸುವ ಜವಾಬ್ದಾರಿ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದೀರಿ ಎಂದು ಸಂಸದ, ಬಿಜೆಪಿ‌ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಬಿಜೆಪಿ ಮಂಗಳೂರು ಕ್ಷೇತ್ರ ವತಿಯಿಂದ ಕೊಲ್ಯ ಸೌಭಾಗ್ಯ ಸದನದಲ್ಲಿ ಶುಕ್ರವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಾಮಾನ್ಯ ಕಾರ್ಯಕರ್ತನೊಬ್ಬನಿಗೆ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ಒಲಿದಿದ್ದು, ಆ ಮೂಲಕ ಬಿಜೆಪಿಯಲ್ಲಿ ಪ್ರತಿಯೊಬ್ಬ ಸಕ್ರಿಯ ಕಾರ್ಯಕರ್ತನಿಗೂ ರಾಜ್ಯಾಧ್ಯಕ್ಷ ಸ್ಥಾನ‌ ಅಲಂಕರಿಸುವ ಯೋಗ್ಯತೆ ಇದೆ ಎಂಬುದನ್ನು ನಿರೂಪಿಸಿದೆ ಎಂದು ಹೇಳಿದರು.

‌ಭಾರತೀಯ ಜನತಾ ಪಾರ್ಟಿಯಲ್ಲಿ ಸಂಘಟನಯೇ ಶಕ್ತಿ. ಯಾಕೆಂದರೆ ಗುಜರಾತಿನ ರೈಲ್ವೇ ಸ್ಟೇಷನ್ ಒಂದರಲ್ಲಿ ಚಹ ಮಾರುತ್ತಿದ್ದ ವ್ಯಕ್ತಿಯೊಬ್ಬರು ಪ್ರಧಾನಿಯಾಗುವ ಮೂಲಕ ಪ್ರಪಂಚದಲ್ಲಿ ಭಾರತ ಏನು‌ ಎಂದು ನಿರೂಪಿಸಿಕೊಡಲು ಸಾಧ್ಯವಾಗಿದ್ದರೆ ಅದು ಬಿಜೆಪಿಯ ವಿಚಾರಧಾರೆ ಹಾಗೂ ನಂಬಿರುವ ಸಿದ್ಧಾಂತಕ್ಕೆ ಸಿಕ್ಕ ಗೌರವ ಎಂದು ಹೇಳಿದರು.

‌ಬಿಜೆಪಿ ಸೂಚನೆ, ಹೇಳಿಕೆ, ಜಾತಿ, ಶ್ರೀಮಂತಿಕೆಯಿಂದ ಬೆಳೆದಿಲ್ಲ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚಿಸಿದಂತೆ ಬಿಜೆಪಿಯಲ್ಲಿ ಮತಗಟ್ಟೆಯ ಅಧ್ಯಕ್ಷ ಸಕ್ರಿಯ ಆಗಲೇಬೇಕು. ಬಸ್ ಗೆ ಕಲ್ಲೆಸೆದರೆ, ಟಯರ್ ಸುಟ್ಟರೆ, ಜಾತಿ ಶಕ್ತಿ ಪ್ರದರ್ಶಿಸಿದರೆ ಬಿಜೆಪಿಯಲ್ಲಿ ಬೆಳವಣಿಗೆ ಸಾಧ್ಯವಿಲ್ಲ. ಯಾಕೆಂದರೆ ಬಿಜೆಪಿ ರಾಜಿಯಲ್ಲದ ಸೂತ್ರದಡಿಯಿಲ್ಲದೆ ಬೆಳೆದಿದೆ. 25 ಸದಸ್ಯರ ಒಂದುಗೂಡಿಸುವ ಮತಗಟ್ಟೆ ಅಧ್ಯಕ್ಷ ಸಕ್ರಿಯ ಸದಸ್ಯನಾಗಿದ್ದರೆ ಮಾತ್ರ ಹಂತ ಹಂತ ಬೆಳವಣಿಗೆ ಸಾಧ್ಯ ಎಂದರು.

ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಡುವುದರ ಮೂಲಕ‌ 68ವರ್ಷಗಳ ಕಾರ್ಯಪದ್ದತಿಯಲ್ಲಿ ವಿಚಾರಧಾರೆಯಲ್ಲಿ ರಾಜಿ ಇಲ್ಲ. ಕಾಂಗ್ರೆಸ್ ಮುಕ್ತ ಭಾರತವೇ ಬಿಜೆಪಿ ಸಂಕಲ್ಪ. ಆಧ್ಯಾತ್ಮಕದ ಬೆಳಕನ್ನು ಕೊಟ್ಟ ಜ್ಞಾನಸುಧೆಯನ್ನು ಪಸರಿಸಿದ ಭಾರತ ವಿಶ್ವಗುರುವಿನ‌ ಸ್ಥಾನದಲ್ಲಿದೆ ಎಂದು ಹೇಳಿದರು.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ಮೈತ್ರಿ ಸರಕಾರ ರಚನೆಗೆ ಬೆಂಬಲ ಕೊಟ್ಟದ್ದು, ಬೆಂಬಲ ಹಿಂತೆಗೆದದ್ದು, ರಾಷ್ಟ್ರಪತಿ ಆಡಳಿತ ಎಲ್ಲದರ ಹಿಂದೆಯೂ ಅಮಿತ್ ಶಾ ಅವರ ಚಾಣಾಕ್ಷತನ ಹಾಗೂ ಪ್ರಧಾನಿಯವರ ಆಡಳಿತಾತ್ಮಕ ಯೋಜನೆ ಇತ್ತು ಎಂಬುದನ್ನು ಮನಗಾಣಬಹುದು ಎಂದು ಹೇಳಿದರು.

ಬಾಲ್ಯದಿಂದಲೂ ಕನಸಿನ‌ ಮಾತಾಗಿದ್ದ 370ವಿಧಿ ರದ್ಧತಿ ಎಲ್ಲರು ಸ್ವಾಗತಿಸುವಂತದ್ದು. ಬಿಜೆಪಿ ಕಾರ್ಯಕರ್ತರು ಆ ವಿಷಯದಲ್ಲಿ ಸ್ಥಾನೀಯ, ಮಂಡಲ ಮಟ್ಟದಲ್ಲಿ ಎಳೆಎಳೆಯಾಗಿ ಹೇಳಬೇಕು. ರಾಷ್ಟ್ರೀಯ ಏಕತೆ, ಬದ್ಧತೆ, ಸಮರ್ಥನೆಗೋಸ್ಕರ ಸ್ವಾಭಿಮಾನಿ ಭಾರತಕ್ಕೋಸ್ಕರ ಎಂಬ ನೆಲೆಯಲ್ಲಿ 370ವಿಧಿ ರದ್ದಾಗಿರೋದು ಎಂದು ಸಂತಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕ ಕೆ. ಜಯರಾಮ‌ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ರೈ ಹಾಗೂ ಸುದರ್ಶನ ಮೂಡುಬಿದಿರೆ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಬಾವ, ಬಿಜೆಪಿ ಮಹಿಳಾ ವೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಪ್ರಧಾನ ಕಾರ್ಯದರ್ಶಿ ರಾಜೀವಿ ಕೆಂಪುಮಣ್ಣು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಕಾರ್ಯದರ್ಶಿ ಸತೀಶ್ ಕುಂಪಲ, ಕ್ಷೇತ್ರ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಉಳ್ಳಾಲ ಪುರಸಭೆಯ ಮಾಜಿ ಕೌನ್ಸಿಲರ್ ಲಲಿತಾ ಸುಂದರ್ ಉಪಸ್ಥಿತರಿದ್ದರು.

ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಸ್ವಾಗತಿಸಿದರು. ಹರಿಯಪ್ಪ ಸಾಲ್ಯಾನ್ ಹಾಗೂ ಜೀವನ್ ಕುಮಾರ್ ತೊಕ್ಕೊಟ್ಟು ಕಾರ್ಯಕ್ರಮ‌ ನಿರೂಪಿಸಿದರು. ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮನೋಜ್ ಆಚಾರ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News