ನೆರೆ ಸಂತ್ರಸ್ತರ ಪರಿಹಾರ ವಿಳಂಬ: ಬೆಳಗಾವಿಯಲ್ಲಿ ಸತ್ಯಾಗ್ರಹ, ಜಿಲ್ಲೆಯಲ್ಲೂ ಧರಣಿ; ಐವನ್ ಡಿಸೋಜ

Update: 2019-09-21 13:20 GMT

ಮಂಗಳೂರು,ಸೆ.21: ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಸರಕಾರ ಬಾರದಿರುವ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಕೆಪಿಸಿಸಿ ವತಿಯಿಂದ ಸೆ.24ರಂದು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಜಿಲ್ಲೆಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮುಂದಿನ ಹಂತದಲ್ಲಿ ಜಿಲ್ಲಾ ಮಟ್ಟದಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವಿದ್ದರೂ 25 ಸಂಸದರಿದ್ದರೂ ರಾಜ್ಯಕ್ಕೆ ನೆರೆ ಪರಿಹಾರ ತರುವಲ್ಲಿ ವಿಫಲವಾಗಿದ್ದಾರೆ. ರಾಜ್ಯದಿಂದ ಕೇಂದ್ರಕ್ಕೆ ಸಂಗ್ರಹವಾಗುವ ತೆರಿಗೆಯಲ್ಲಿ ಶೇ. 58 ಭಾಗ ಕೇಂದ್ರಕ್ಕೆ ಹೋಗುತ್ತದೆ. ಸುಮಾರು ಒಂದು ಲಕ್ಷ ಕೋಟಿ ರೂ. ತೆರಿಗೆ ರಾಜ್ಯದಿಂದ ಕೇಂದ್ರಕ್ಕೆ ಹೋಗುತ್ತದೆ. ರಾಜ್ಯದಲ್ಲಿ ನೆರೆ ಹಾನಿಯ ಬಗ್ಗೆ ಸರಕಾರವೇ ನೀಡಿದ ಪ್ರಕಾರ 35 ಸಾವಿರ ಕೋಟಿ ರೂ. ನಷ್ಟ. ಇದುವರೆಗೆ ಬಿಡುಗಡೆಯಾದ ಅನುದಾನ 1500 ಕೋಟಿ ರೂ. ಅಂದರೆ ಒಟ್ಟು ನಷ್ಟದ ಶೇ 4.2 ಪರಿಹಾರ ನೀಡಿದಂತಾಗಿದೆ. ಮನೆ ಕಳೆದುಕೊಂಡವರಿಗೆ ಕೇವಲ 10ಸಾವಿರ ಮಾತ್ರ ಪರಿಹಾರ ನಿಡಲಾಗಿದೆ. ಆದರೆ ಬಳಿಕ ಅವರಿಗೆ ತಿಂಗಳಿಗೆ ನೀಡಬೇಕಾದ ಮನೆ ಬಾಡಿಗೆ ತಿಂಗಳಿಗೆ ಕನಿಷ್ಠ 5 ಸಾವಿರ ರೂ., ಇತರ ವೆಚ್ಚ ಯಾವೂದು ಪಾವತಿಯಾಗುತ್ತಿಲ್ಲ .88 ಮಂದಿ ಸಾವಿಗೀಡಾಗಿದ್ದಾರೆ. ಪರಿಹಾರ ದೊರೆಯದೆ ರೈತರು ಆತ್ಮ ಹತ್ಯೆ ಮಾಡುತ್ತಿದ್ದಾರೆ. ಸರಕಾರ ನಿಷ್ಕ್ರೀಯವಾಗಿದೆ ಎಂದು ಐವನ್ ಡಿ ಸೋಜ ಆರೋಪಿಸಿದ್ದಾರೆ.

ಸರಕಾರ ತಕ್ಷಣ ಈ ಬಗ್ಗೆ ಗಮನ ಹರಿಸಿ ಸಂತ್ರಸ್ತರಿಗೆ ತುರ್ತುಪರಿಹಾರ ನೀಡಬೇಕು ಎಂದು ಐವನ್ ಡಿಸೋಜ ಒತ್ತಾಯಿಸಿದ್ದಾರೆ.

ದೇಶದಲ್ಲಿ ಸಾಕಷ್ಟು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮುಚ್ಚುತ್ತಿವೆ. ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಕಾರ್ಪೋರೇಟ್ ಶಕ್ತಿಗಳನ್ನು ರಕ್ಷಿಸಲು ಜಿಎಸ್‌ಟಿ ಕಡಿತ ಮಾಡಲು ಮುಂದಾಗಿದೆ. ರೈತರಿಗೆ ಜನ ಸಾಮಾನ್ಯರಿಗೆ ಉದ್ಯೋಗ ನೀಡುವ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದರು.

ವಿವಿಧ ಕಾಯಿಲೆಯಿಂದ ಬಳಲುತ್ತಿರುವ ಉಳ್ಳಾಲದ ಶಕುಂತಲ ಸೌಮ್ಯರಿಗೆ ರೂ.70,423, ಯು.ಎಂ.ರಾಮ ಸುಳ್ಯ 56,000, ಮಿಕ್ವಾದ್ ತೆಂಕುಳಿಪಾಡಿ ರೂ.36,346, ಸೇಸು ಬೆಳ್ತಂಗಡಿ ಇವರಿಗೆ ರೂ.31,570 , ಅಬ್ದುಲ್ ಖಾದರ್ ಅಡ್ಯಾರ್ ರಿಗೆ ರೂ.20,000, ಅಬೂಬಕ್ಕರ್ ಸುಳ್ಯ 15,000 ಮೊದಲಾದವರಿಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಶಿಫಾರಸ್ಸಿನ ಮೇಲೆ ರಾಜ್ಯದ ಮುಖ್ಯಮಂತ್ರಿಯಿಂದ ಬಿಡುಗಡೆಯಾದ ಪರಿಹಾರಧನದ ಚೆಕ್ಕನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೋಡಿಜಾಲ್ ಇಬ್ರಾಹೀಂ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಭಾಸ್ಕರ.ಕೆ, ಮಾಜಿ ಮನಪಾ ಸದಸ್ಯರಾದ ನವೀನ್ ಡಿ ಸೋಜ, ಅಶೋಕ್, ಖಾಲಿದ್ ಉಜಿರೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News