ತುಂಬೆ ಕಾಲೇಜಿನಲ್ಲಿ 'ಗಾಂಧಿ 150' ವಿಶೇಷ ಉಪನ್ಯಾಸ

Update: 2019-09-21 13:33 GMT

ಬಂಟ್ವಾಳ, ಸೆ. 21: ಮಹಾತ್ಮ ಗಾಂಧೀಜಿಯವರನ್ನು ಹುತಾತ್ಮರಾದಾಗ ಇಡೀ ದೇಶ ಮಾತ್ರವಲ್ಲ ಜಗತ್ತೇ ಶೋಕ ಸಾಗರದಲ್ಲಿ ಮುಳುಗಿತು. ಅಂದು ವಿಶ್ವ ಸಂಸ್ಥೆ ಆವರಣದ ಎಲ್ಲ ದೇಶದ ಧ್ವಜಗಳನ್ನು ಅರ್ಧಕ್ಕಿಳಿಸಿ ಶೋಕಾಚರಣೆಯನ್ನು ಆಚರಿಸಲಾಯಿತು ಎಂದು ಇತಿಹಾಸ ತಜ್ಞ ಸಂಶೋಧಕ ತುಕಾರಾಮ ಪೂಜಾರಿ ಹೇಳಿದ್ದಾರೆ.  

ಅವರು ಮಂಗಳೂರಿನ ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನ ತುಂಬೆ ವಿದ್ಯಾ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದ ಗಾಂಧಿ 150 ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ತುಂಬೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಈ ರೀತಿಯ ಅಪೂರ್ವ ಕ್ಷಣ ಹಿಂದೆಂದೂ ಆಗಿರಲಿಲ್ಲ. ಅವರ ಮರಣಾನಂತರ ಮುಂದೆಯೂ ಆಗಿರಲಿಲ್ಲ. ಅಂತಹ ಅಪೂರ್ವ ಮಾನವತೆಯ, ಶಾಂತಿಯ, ಅಹಿಂಸೆಯ, ಸತ್ಯದ ಅಪೂರ್ವ ಪುರುಷ ಮಹಾತ್ಮಾ ಗಾಂಧೀಜಿಯಾಗಿದ್ದರು. ಅವರ ಜೀವನ ಹಾಗೂ ತತ್ವಾದರ್ಶಗಳು ಅನುಕರಣೀಯವಾದವುಗಳಾಗಿವೆ ಎಂದು ಅವರು ಹೇಳಿದರು.  

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವ ಮಾತನಾಡಿ, ಇತರರಿಗಾಗಿ ಯಾರು ಬದುಕುತ್ತಾರೋ ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಅಂತಹ ಅದ್ಭುತವಾದ ಚೇತನ ಮಹಾತ್ಮಾ ಗಾಂಧೀಜಿಯವರು. ಸ್ವಚ್ಛತೆ, ಚಿಂತನೆ, ಸತ್ಯ, ಅಹಿಂಸೆ, ನ್ಯಾಯ, ಸತ್ಯಾಗ್ರಹದಂತಹ ಅವರ ಚಿಂತನೆ ಪ್ರಸ್ತುತ ದೇಶಕ್ಕಾಗಿ ಅವರು ಬದುಕಿದರು. ಯಾವ ಕಾಲಕ್ಕೂ ತನ್ನ ವಿಚಾರಧಾರೆಯನ್ನು ಬಿಡದೆ ಬದುಕಿದರು ಎಂದರು.

ಸಮಾರಂಭದ ಮೊದಲಿಗೆ ಪ್ರತಿಷ್ಠಾನದ ಕಾರ್ಯದರ್ಶಿ ಬದ್ರಿಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಇಸ್ಮಾಯಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಪ್ರತಿಷ್ಠಾನದ ವತಿಯಿಂದ ಅತಿಥಿಗಳಿಗೆ ಸ್ವದೇಶಿ ನೂಲಿನ ಹಾರ ಹಾಕಿ ಗಾಂಧಿ ಪುತ್ಥಳಿಯನ್ನು ನೀಡಿ ಗೌರವಿಸಲಾಯಿತು.  ಪ್ರತಿಷ್ಠಾನದ ಉಪಾಧ್ಯಕ್ಷ ಬಿ. ಪ್ರಭಾಕರ ಶ್ರೀಯಾನ್, ಸಹಾಯಕ ಕೋಶಾಧಿಕಾರಿ ಪ್ರೇಮಚಂದ್, ಜೊತೆ ಕಾರ್ಯದರ್ಶಿಗಳಾದ ಹೆರಾಲ್ಡ್ ಡಿಸೋಜ, ಕಲ್ಲೂರು ನಾಗೇಶ, ಉಪನ್ಯಾಸಕಾರ ಅಮಿತಾ ಕುಮಾರಿ, ಶರ್ಮಿಳಾ, ಕೆ. ಸಾಯಿರಾಂ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

ಉಪನ್ಯಾಸಕರಾದ ಅಬ್ದುಲ್ ರಹಿಮಾನ್ ಡಿ. ಬಿ. ಸ್ವಾಗತಿಸಿ, ದಿನೇಶ್ ಶೆಟ್ಟಿ ಅಳಿಕೆ ವಂದಿಸಿದರು. ಉಪನ್ಯಾಸಕ ವಿ. ಎಸ್. ಭಟ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News