ಮರೆವು ರೋಗಿಗಳ ಪಾಲನೆ, ಪೋಷಣೆಗೆ ಜಿಲ್ಲಾಡಳಿತ ನೆರವು: ಡಿಸಿ ಸಿಂಧೂ ರೂಪೇಶ್

Update: 2019-09-21 13:46 GMT

ಮಂಗಳೂರು,ಸೆ.21: ಮರೆವಿನ ಸಮಸ್ಯೆಯಿಂದ ತೊಂದರೆಗೊಳಗಾಗಿರುವವರ ಆರೈಕೆ, ಪಾಲನೆ, ಪೋಷಣೆಗೆ ಜಿಲ್ಲಾಡಳಿತ ಸಂಪೂರ್ಣ ನೆರವು ನೀಡಲಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.

ಮರೆವು ಕಾಯಿಲೆಯವರ ಪರವಾಗಿ ಕೆಲಸ ಮಾಡುತ್ತಿರುವ ಸಂಘಸಂಸ್ಥೆಗಳ ಒಕ್ಕೂಟ (ಪೀಪಲ್ಸ್ ಅಸೋಸಿಯೇಶನ್ ಫಾರ್ ಜಿರಿಯಾಟ್ರಿಕ್ ಎಂಪವರ್ಮೆಂಟ್) ‘ಪೇಜ್’ ವತಿಯಿಂದ ಶನಿವಾರ ನಗರದ ಪುರಭವನದಲ್ಲಿ ನಡೆದ ವಿಶ್ವ ಆಲ್ಝೈಮರ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಹಿರಿಯರ ಮತ್ತು ಮರೆವು ಕಾಯಿಲೆಯಿಂದ ಬಳಲುತ್ತಿರುವ ಆರೋಗ್ಯ ಮತ್ತು ರಕ್ಷಣೆಯು ತುಂಬಾ ಸಂಕೀರ್ಣಮಯವಾಗಿದೆ. ಈ ನಿಟ್ಟಿನಲ್ಲಿ ಅಂತಹವರ ಪಾಲನೆ, ಪೋಷಣೆ ಮತ್ತು ರಕ್ಷಣೆಯಲ್ಲಿ ಸಂಘ ಸಂಸ್ಥೆಗಳ ಹಾಗೂ ವೈದ್ಯಕೀಯ ಕ್ಷೇತ್ರದ ಮಾರ್ಗದರ್ಶನ, ಸಹಕಾರ ಅತ್ಯಗತ್ಯ. ಸಕಾಲದಲ್ಲಿ ಅವರಿಗ ಸೂಕ್ತ ಸೌಲಭ್ಯಗಳನ್ನು ತಲುಪಿಸುವ ಕಾರ್ಯವಾಗಬೇಕಿದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಿಂಧೂ ರೂಪೇಶ್ ನುಡಿದರು.

ಕೆಎಂಸಿ ನರರೋಗ ವಿಭಾಗದ ವೈದ್ಯ ಡಾ.ಐ.ಜಿ.ಭಟ್ ಮತ್ತು ಯೆನೆಪೊಯ ವಿವಿಯ ಸಹ ಕುಲಾಧಿಪತಿ ಡಾ.ಸಿ.ವಿ.ರಘುವೀರ್ ಮಾತನಾಡಿ ಮರೆವು ಕಾಯಿಲೆಯಿಂದ ಬಳಲುತ್ತಿರುವವರು ಹಾಗೂ ಹಿರಿಯ ನಾಗರಿಕರ ಕಾಳಜಿಯ ಅಗತ್ಯವನ್ನು ಪ್ರತಿಪಾದಿಸಿದರು.

‘ಪೇಜ್’ ಕಾರ್ಯದರ್ಶಿ ಜೆರಾರ್ಡಿನ್ ಡಿಸೋಜ ಮಾತನಾಡಿ ಮರೆವು ಕಾಯಿಲೆಯಿಂದ ಬಳಲುತ್ತಿರುವವರ ಚಿಕಿತ್ಸೆಗಾಗಿ ಕೇರಳ ಮಾದರಿಯ ಪ್ಯಾಕೇಜ್ ಪ್ರಕಟಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.

ಮರೆವು ರೋಗಿಗಳ ಚಿಕಿತ್ಸೆ ಕುರಿತಂತೆ ಕವಿತಾ ಮತ್ತು ಕಿರಣ್ ಭಟ್ ಹಾಗೂ ಮಂಗಳೂರು ಕೆಮಿಕಲ್ಸ್ ಮತ್ತು ಪರ್ಟಿಲೈಝರ್ಸ್ (ಎಂಸಿಎಫ್) ನಿರ್ದೇಶಕ ಕೆ.ಪ್ರಭಾಕರ ರಾವ್ ಮಾತನಾಡಿದರು. ವೇದಿಕೆಯಲ್ಲಿ ನಿಟ್ಟೆ ವಿವಿಯ ಮಾನಸಿಕ ರೋಗ ವಿಭಾಗದ ಮುಖ್ಯಸ್ಥ ಡಾ.ಸತೀಶ್ ರಾವ್, ಯನೆಪೊಯ ವಿವಿಯ ಮಾನಸಿಕ ರೋಗ ವಿಭಾಗದ ಮುಖ್ಯಸ್ಥ ಡಾ.ಅನಿಲ್ ಕಾಕುಂಜೆ, ಪೇಜ್ ಅಧ್ಯಕ್ಷೆ ಡಾ.ಒಲಿಂಡ ಪಿರೇರಾ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಪೇಜ್ ಉಪಾಧ್ಯಕ್ಷೆ ಡಾ.ಪ್ರಭಾ ಅಧಿಕಾರಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಮೋಹನ್ ರಾಜ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News