16ನೇ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ: ಸೈನೈಡ್ ಮೋಹನ್ ಮೇಲಿನ ಆರೋಪ ಸಾಬೀತು

Update: 2019-09-21 15:01 GMT

ಮಂಗಳೂರು, ಸೆ.21: ಅತ್ಯಾಚಾರ, ಕೊಲೆ ಪ್ರಕರಣದ ಸರಣಿ ಹಂತಕ ಸೈನೈಡ್ ಮೋಹನ್‌ನ 16ನೇ ಪ್ರಕರಣದ ಆರೋಪವು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶನಿವಾರ ಸಾಬೀತಾಗಿದ್ದು, ಅಪರಾಧಿಗೆ ಶಿಕ್ಷೆ ಪ್ರಮಾಣ ದಿನಾಂಕ ಕಾಯ್ದಿರಿಸಲಾಗಿದೆ.

ಪ್ರಕರಣ ವಿವರ: ಸೈನೈಡ್ ಮೋಹನ್‌ ಕುಮಾರ್ 2007ರಲ್ಲಿ ಕಾಸರಗೋಡು ತಾಲೂಕಿನ ಉಪ್ಪಳ ಬಸ್ ತಂಗುದಾಣದಲ್ಲಿ ಬೇಕೂರಿನ 33 ವರ್ಷದ ಯುವತಿಯೊಬ್ಬಳನ್ನು ಪರಿಚಯಿಸಿಕೊಳ್ಳುತ್ತಾನೆ. ತನ್ನನ್ನು ಸುಧಾಕರ ಆಚಾರ್ಯ ಎಂದು ಹೇಳಿದ್ದ. ಅರಣ್ಯ ಇಲಾಖೆಯಲ್ಲಿ ಉದ್ಯೋಗಿ ಎಂದು ನಂಬಿಸಿ ಆಕೆಯ ಜತೆ ಪ್ರೀತಿಸುವ ನಾಟಕವಾಡುತ್ತಾನೆ.

ಬಳಿಕ ಆಕೆಯ ಮನೆಗೂ ಒಂದು ಬಾರಿ ಹೋಗಿ ಪೋಷಕರ ವಿಶ್ವಾಸ ಗಳಿಸುತ್ತಾನೆ. ಯುವತಿ ಸಂಗೀತ ಶಿಕ್ಷಕಿಯಾಗಿ ತರಬೇತಿ ನೀಡುತ್ತಿದ್ದಲ್ಲದೆ, ಆಡಿಯೋ ರೆಕಾರ್ಡ್ ಬಿಡುಗಡೆ ಮಾಡಿದ್ದಳು. 2007ರ ಮೇ 28ರಂದು ಯುವತಿ ಮಂಗಳೂರಿನಲ್ಲಿ ಆಡಿಯೋ ರೆಕಾರ್ಡ್ ಮಾಡಲಿಕ್ಕಿದೆ ಎಂದು ಹೇಳಿ ಮನೆಯಿಂದ ಹೋಗಿದ್ದಳು. ಬಳಿಕ ಇಬ್ಬರು ಬೆಂಗಳೂರಿಗೆ ತೆರಳಿ ವಸತಿಗೃಹದಲ್ಲಿ ಕೊಠಡಿ ಪಡೆದುಕೊಂಡಿದ್ದರು. ಲಾಡ್ಜ್‌ನಲ್ಲಿ ಸುಧಾಕರ ಆಚಾರ್ಯ ಎಂದು ಪರಿಚಯಿಸಿ ಕೊಠಡಿ ಪಡೆದಿದ್ದ.

ಮೇ 29ರಂದು ಬೆಳಗ್ಗೆ ಮೋಹನ ಯುವತಿ ಬಳಿ ‘ನಮಗಿಬ್ಬರಿಗೆ ಪೂಜೆಗೆ ಹೋಗಲಿಕ್ಕಿದೆ, ಪೂಜೆ ಮಾಡುವಾಗ ನಿನ್ನಲ್ಲಿ ಯಾವುದೇ ಆಭರಣ ಇರಬಾರದು. ನಿನ್ನ ಚಿನ್ನಾಭರಣ, ಹಣ ಕೊಠಡಿಯಲ್ಲಿಡು, ನಾವು ಪೂಜೆ ಮಾಡಿ ಹಿಂದಿರುಗಿ ಬರೋಣ’ ಎಂದು ನಂಬಿಸಿದ್ದಾನೆ.

ಇದಾದ ಬಳಿಕ ಇಬ್ಬರೂ ಹೊರಗೆ ಹೋಗಿದ್ದು ಬೆಂಗಳೂರು ಬಸ್ ನಿಲ್ದಾಣದ ಬಳಿ ಯುವತಿಯಲ್ಲಿ ‘ನಿನ್ನೆ ಲೈಂಗಿಕ ಸಂಪರ್ಕ ಮಾಡಿದ ಕಾರಣ ಗರ್ಭಿಣಿಯಾಗದಂತೆ ತಡೆಯಲು ಶೌಚಾಲಯಕ್ಕೆ ಹೋಗಿ ಈ ಮಾತ್ರೆ ಸೇವಿಸು’ ಎಂದು ಸೈನೈಡ್ ನೀಡಿದ್ದ. ಇದನ್ನು ನಂಬಿದ ಯುವತಿ ಮಾತ್ರೆ ಸೇವಿಸಿ ಅಲ್ಲೇ ಕುಸಿದು ಬಿದ್ದಿದ್ದಾಳೆ. ಸ್ಥಳೀಯರು ಇದನ್ನು ನೋಡಿ ಯುವತಿಯನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದಾಗ ಯುವತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಯುವತಿ ಬಿದ್ದ ಬಳಿಕ ಮೋಹನ್ ಕೊಠಡಿಗೆ ತೆರಳಿ ಚಿನ್ನಾಭರಣ ಸಹಿತ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಆ ಚಿನ್ನಾಭರಣವನ್ನು ಮಂಗಳೂರು ನಗರಕ್ಕೆ ತಂದು ಮಾರಾಟ ಮಾಡಿದ್ದ.

ಪ್ರಕರಣ ಬಯಲಿಗೆ: ಮನೆಯಿಂದ ಹೊರಗೆ ಹೋದ ಯುವತಿ ಯುವಕನ ಜತೆ ಮದುವೆಯಾಗಿ ಖುಷಿಯಿಂದ ಇರಲೆಂದು ನಿರ್ಧರಿಸಿದ ಪೋಷಕರು ಪೊಲೀಸ್ ಠಾಣೆಗೆ ನಾಪತ್ತೆ ಬಗ್ಗೆ ದೂರು ನೀಡಿರಲಿಲ್ಲ. ಆದರೆ 2009ರಲ್ಲಿ ಮೋಹನ್ ಬಂಧನವಾಗಿ ಟಿವಿಯಲ್ಲಿ ವರದಿಯಾಗುತ್ತಿದ್ದಂತೆ ಆತನ ಗುರುತು ಕಂಡು ಹಿಡಿಯುತ್ತಾರೆ. ಬಳಿಕ ಯುವತಿಯ ಸಹೋದರಿ ಬೆಂಗಳೂರಿನ ಉಪ್ಪಾರ ಠಾಣೆಯಲ್ಲಿ ನಾಪತ್ತೆ ದೂರು ನೀಡುತ್ತಾರೆ.
2009 ಅಕ್ಟೋಬರ್ 26ರಂದು ಬರಿಮಾರು ಯುವತಿಯೊಬ್ಬಳ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಆರೋಪಿ ಮೋಹನ ಮಂಜೇಶ್ವರದ ಯುವತಿಯ ಕೊಲೆ ಮಾಡಿದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಸಿಒಡಿ ಡಿವೈಎಸ್ಪಿ ಶಿವಶರಣಪ್ಪ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ತನಿಖಾಧಿಕಾರಿ ಲೋಕೇಶ್ವರ, ನಾಗರಾಜ ವಿಚಾರಣೆ ನಡೆಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಯಿದುನ್ನೀಸಾ 38 ಸಾಕ್ಷಿ ವಿಚಾರಣೆ ನಡೆಸಿ, 49 ದಾಖಲೆ ಪರಿಗಣಿಸಿ ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಶಿಕ್ಷೆ ಪ್ರಮಾಣವನ್ನು ಸೆ.25ರಂದು ಪ್ರಕಟಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಸರಣಿ ಹಂತಕ ಸೈನೈಡ್ ಮೋಹನ್ ವಿರುದ್ಧ ಒಟ್ಟು 20 ಪ್ರಕರಣಗಳಿದ್ದು, 16 ಪ್ರಕರಣಗಳು ಇತ್ಯರ್ಥಗೊಂಡಿವೆ. ಇನ್ನು ನಾಲ್ಕು ಪ್ರಕರಣಗಳು ನಾಲ್ಕು ತಿಂಗಳೊಳಗೆ ವಿಚಾರಣೆ ಮುಗಿಸುವ ಸಾಧ್ಯತೆಯಿದೆ.

ಆರೋಪ ಸಾಬೀತು: ಅಪರಾಧಿ ಮೋಹನ್ ಮೇಲೆ ಸೆಕ್ಷನ್ 302 (ಕೊಲೆ), ಸೆಕ್ಷನ್ 328 (ವಿಷ ಉಣಿಸಿದ್ದು), ಸೆಕ್ಷನ್ 392 (ಚಿನ್ನಾಭರಣ ಸುಲಿಗೆ), ಸೆಕ್ಷನ್ 394 (ವಿಷಪ್ರಾಸನ), ಸೆಕ್ಷನ್ 417 (ವಂಚನೆ),ಸೆಕ್ಷನ್ 207 (ಸಾಕ್ಷ್ಯನಾಶ)ರ ಅಪರಾಧ ಸಾಬೀತುಪಡಿಸಿ ಕೋರ್ಟ್ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News