ಇಂಗ್ಲಿಷ್ ಸಾಹಿತ್ಯದಲ್ಲಿ ಗಾಂಧಿ ಪ್ರಭಾವ ತೀರಾ ಕಡಿಮೆ: ಡಾ.ಎಂ.ಜಿ.ಹೆಗಡೆ

Update: 2019-09-21 14:26 GMT

ಉಡುಪಿ, ಸೆ.21: ಭಾರತೀಯ ಭಾಷಾ ಸಾಹಿತ್ಯದಲ್ಲಿ ಇದ್ದಷ್ಟು ಗಾಂಧೀ ಪ್ರಭಾವ ಇಂಗ್ಲಿಷ್ ಸಾಹಿತ್ಯದಲ್ಲಿ ಕಂಡುಬರುತ್ತಿಲ್ಲ. ಆದರೂ ಕೂಡ ಕೆಲವು ಸಾಹಿತಿಗಳ ಇಂಗ್ಲಿಷ್ ಕಾದಂಬರಿಗಳು ಗಾಂಧಿ ಪ್ರಭಾವದಿಂದ ಹೊರತಾಗಿಲ್ಲ. ಇವರು ಗಾಂಧಿ ವಿಚಾರಧಾರೆಯನ್ನು ಬಳಸಿಕೊಂಡು ತಮ್ಮ ಕಾದಂಬರಿಗಳಲ್ಲಿ ಪಾತ್ರಗಳನ್ನು ಸೃಷ್ಠಿಸಿದ್ದಾರೆ ಎಂದು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾ ನಿಲಯದ ಇಂಗ್ಲಿಷ್ ವಿಭಾಗದ ನಿಕಟಪೂರ್ವ ಮುಖ್ಯಸ್ಥ ಡಾ.ಎಂ.ಜಿ.ಹೆಗಡೆ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ಆಂಗ್ಲ ಭಾಷಾ ವಿಭಾಗ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಶನಿವಾರ ಕಾಲೇಜಿನ ಕಾಲೇಜಿನ ಎ.ವಿ. ಹಾಲ್‌ನಲ್ಲಿ ಆಯೋಜಿಸಲಾದ ಭಾರತೀಯ ಇಂಗ್ಲಿಷ್ ಸಾಹಿತ್ಯದಲ್ಲಿ ಗಾಂಧಿ ಎಂಬ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಗಾಂಧೀಜಿ ಸ್ವಾತಂತ್ರ ಚಳವಳಿಗೆ ಕಾಲಿರಿಸುವ ಮೊದಲು ದೇಶದ ಸಾಹಿತಿ ಗಳಲ್ಲಿ ಬ್ರಿಟಿಷ್ ವ್ಯವಸ್ಥೆಯಿಂದ ಪ್ರಾಚೀನ ಭಾರತ ವೈಭವ ಮರುಕಳಿಸಲು ಸಾಧ್ಯ ಎಂಬ ಆಶಾಭಾವನೆ ಇತ್ತು. ಆದರೆ 1920ರ ಸುಮಾರಿಗೆ ಸ್ವಾತಂತ್ರ ಹೋರಾಟಕ್ಕೆ ಪ್ರವೇಶ ಮಾಡಿದ ಗಾಂಧೀಜಿ, ನಿಜವಾದ ಭಾರತೀಯತೆ ಎಂಬುದು ಹಳ್ಳಿಗಳಲ್ಲಿ ಹಾಗೂ ಜನರ ನಡುವೆ ಇದೆ ಎಂಬುದನ್ನು ಪ್ರತಿ ಪಾದಿಸಿದರು. ಈ ವಿಚಾರಧಾರೆಯು ಭಾರತೀಯ ಭಾಷಾ ಸಾಹಿತ್ಯದಲ್ಲಿ ಪ್ರಮುಖ ವಸ್ತುವಾಗಿದ್ದರೆ, ಇಂಗ್ಲಿಷ್ ಸಾಹಿತ್ಯದಲ್ಲಿ ಮಾತ್ರ ಕಂಡುಬರುತ್ತಿಲ್ಲ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್‌ನ ನಿರ್ದೇಶಕ ಪ್ರೊ. ವರದೇಶ್ ಹೀರೆಗಂಗೆ ಮಾತನಾಡಿ, ಕೆಲವರು ಗಾಂಧೀಜಿಯನ್ನು ಪ್ರತಿಮೆ ಯನ್ನಾಗಿ ಪೂಜಿಸಿದರೆ, ಇನ್ನು ಕೆಲವರು ಸಾಮಾಜಿಕ ತಾಣಗಳಲ್ಲಿ ಗಾಂಧೀಜಿ ವಿರುದ್ಧ ಧ್ವೇಷ ಹರಡಿಸುವ ಕೆಲಸ ಮಾಡುತಿದ್ದಾರೆ. ಆದರೆ ಇನ್ನೊಂದು ವರ್ಗ ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಗಾಂಧೀಜಿ ವಿಚಾರ ದಲ್ಲಿ ನಿರಾಸಕ್ತಿ ತೋರಿಸುತ್ತಿದೆ ಎಂದು ತಿಳಿಸಿದರು.

ಗಾಂಧೀಜಿ ಇಂದಿಗೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಚರ್ಚೆಗೆ ಒಳಪಡುತ್ತಲೇ ಇದ್ದಾರೆ. ಆ ಮೂಲಕ ಅವರ ವಿಚಾರಧಾರೆ ಚಾಲ್ತಿಯಲ್ಲಿ ಇರುವುದು ಕಾಣಬಹುದು. ಗಾಂಧೀಜಿ ಪ್ರಕಾರ ಸಾಹಿತ್ಯ ಎಂಬುದು ಜನೋಪಯೋಗಿಯೇ ಹೊರತು ಮನರಂಜನೆ ಆಗಬಾರದು. ಸಾಹಿತ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಇರಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ್ ವಹಿಸಿ ದ್ದರು. ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಡಾ.ದೇವಿದಾಸ್ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಂಧಿ ಅಧ್ಯಯನ ಕೇಂದ್ರದ ಮುಖ್ಯಸ್ಥ ವಿನೀತ್ ರಾವ್ ವಂದಿಸಿದರು. ವಿದ್ಯಾರ್ಥಿನಿ ಮೈತ್ರೇಯಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News