‘ಪಿವೋಟ್ ಪದ್ಯಗಳು’ ಪುಸ್ತಕ ಲೋಕಾರ್ಪಣೆ

Update: 2019-09-21 14:53 GMT

ಮಂಗಳೂರು, ಸೆ.21: ಮಂಗಳೂರಿನ ಸಾಹಿತ್ಯಾಸಕ್ತರ ಬಳಗದಿಂದ ನಗರದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಯುವ ಕವಯತ್ರಿ ನಜ್ಮಾ ನಝೀರ್ ಚಿಕ್ಕನೇರಳೆ ರಚಿತ ‘ಪಿವೋಟ್ ಪದ್ಯಗಳು’ ಪುಸ್ತಕವನ್ನು ವಿವಿ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪಟ್ಟಾಭಿರಾಮ ಸೋಮಯಾಜಿ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಪಟ್ಟಾಭಿರಾಮ ಸೋಮಯಾಜಿ, ಇಂದಿನ ಯುವ ಜನಾಂಗದಲ್ಲಿ ಕಾವ್ಯ, ಸಾಹಿತ್ಯದ ಗಂಧಗಾಳಿಯೇ ಇಲ್ಲ. ಮಾತುಮಾತಿಗೆ ದ್ವೇಷಗಳು ಹಿಂಬಾಲಿಸುತ್ತಿವೆ. ಇಂತಹ ವಿಷಮ ಸ್ಥಿತಿಯಲ್ಲಿ ಯುವಜನಾಂಗವನ್ನು ಎಚ್ಚರಿಸುವ ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ‘ಪಿವೋಟ್ ಪದ್ಯಗಳು’ ಸಮಾಜವನ್ನು ಎಚ್ಚರಿಸುವ ಪ್ರತಿರೂಪದಂತಿವೆ ಎಂದರು.

ಕೋಮುದ್ವೇಷ ಭಾವನೆಯಿಂದ ಚೂರಿ, ಕತ್ತಿ, ದೊಣ್ಣೆ ಹಿಡಿದವರಿಗೆ ಪದ್ಯಗಳು ರಚಿಸದಿರಬಹುದು. ಆದರೆ ಸೂಕ್ಷ್ಮ ಮನಸುಳ್ಳವರಿಗೆ ತೀರಾ ಸಾಮೀಪ್ಯ ವಹಿಸುತ್ತವೆ. ಪ್ರಸ್ತುತ ಸಮಾಜದ ತ್ರಿಶಂಕು ಸ್ಥಿತಿಯಲ್ಲಿ ಮನಸುಗಳನ್ನು ಬಡಿದೆಬ್ಬಿಸುವ ಕಾರ್ಯ ಹಿಂದೆಂದಿಗಿಂತಲೂ ಈಗ ಅಗತ್ಯವಿದೆ. ಉದಯೋನ್ಮುಖ ಲೇಖಕಿ ನಜ್ಮಾ ತಮ್ಮ ಪುಸ್ತಕದುದ್ದಕ್ಕೂ ಅದನ್ನು ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.

ಪ್ರೀತಿ-ಪ್ರೇಮ, ಪ್ರೀತಿಯ ವಂಚನೆ, ಪ್ರೀತಿಯ ಹಂಬಲವನ್ನು ಕವನಗಳ ಮೂಲಕವೇ ತೋರಿಸಿದ್ದು, ಸುತ್ತಮುತ್ತಲಿನ ತಾರತಮ್ಯಗಳನ್ನು ಅಕ್ಷರಗಳಿಂದಲೇ ಪ್ರತಿಭಟಿಸಿದ್ದಾರೆ. ಉದಯೋನ್ಮುಖ ಕವಯತ್ರಿ ನಜ್ಮಾ ಅವರ ಸಾಹಿತ್ಯ ಕೃಷಿ ಮುಂದುವರಿಯಲಿ ಎಂದು ಅವರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪುಸ್ತಕದ ಲೇಖಕಿ ನಜ್ಮಾ ನಝೀರ್ ಚಿಕ್ಕನೇರಳೆ, ‘ರಾಜ್ ನ್ಯೂಸ್’ನ ಕಾರ್ಯಕ್ರಮ ನಿರ್ಮಾಪಕ ರಾ.ಚಿಂತನ್ ಉಪಸ್ಥಿತರಿದ್ದರು. ಪತ್ರಕರ್ತ ಶಂಶೀರ್ ಬುಡೋಳಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News