ಪಾಕಿಸ್ತಾನ ಸೇರದಂತೆ ಅಸ್ಸಾಮನ್ನು ರಕ್ಷಿಸಿದ್ದು ಶ್ಯಾಮ ಪ್ರಸಾದ್ ಮುಖರ್ಜಿ: ಬಿಜೆಪಿ ನಾಯಕ ರಾಮ್ ಮಾಧವ್

Update: 2019-09-21 15:13 GMT

ಸಿಲ್ಚಾರ್(ಅಸ್ಸಾಂ),ಸೆ.21: ಭಾರತೀಯ ಜನಸಂಘದ ಸ್ಥಾಪಕ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರು ಅಸ್ಸಾಂ ಪಾಕಿಸ್ತಾನಕ್ಕೆ ಸೇರದಂತೆ ನೋಡಿಕೊಳ್ಳುವ ಮೂಲಕ ಅದನ್ನು ರಕ್ಷಿಸಿದ್ದರು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ ಮಾಧವ ಹೇಳಿದ್ದಾರೆ.

ಶುಕ್ರವಾರ ಇಲ್ಲಿ ಜಿಜೆಪಿ ನಾಯಕ ಬಿಮಲಾಂಗ್ಷು ರಾಯ್ ಅವರ 81ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,ನಾವು ಮುಖರ್ಜಿಯವರ ಅನುಯಾಯಿಗಳಾಗಿದ್ದೇವೆ ಮತ್ತು ಕಿರುಕುಳಕ್ಕೊಳಗಾದ ಬಂಗಾಳಿಗಳಿಗೆ ಸಾಕಷ್ಟು ಭದ್ರತೆಯನ್ನು ಒದಗಿಸುವುದು ನಾವು ಈ ಮಹಾನ್ ಬಂಗಾಳಿ ನಾಯಕನಿಗೆ ಸಲ್ಲಿಸುವ ಗೌರವವಾಗಿದೆ ಎಂದರು.

ಮುಖರ್ಜಿಯವರು ಅಸ್ಸಾಂ ಪಾಕಿಸ್ತಾನದ ಭಾಗವಾಗುವುದನ್ನು ತಪ್ಪಿಸಿದ್ದರು. ಅಸ್ಸಾಂ ಗ್ರುಪ್-ಸಿ ರಾಜ್ಯವಾಗಿತ್ತು ಮತ್ತು ವಿಭಜನೆಯ ಸಂದರ್ಭ ಪೂರ್ವ ಪಾಕಿಸ್ತಾನದ ಭಾಗವಾಗಲಿತ್ತು. ಆದರೆ ಮುಖರ್ಜಿಯವರು ಗೋಪಿನಾಥ ಬರ್ದೊಲೊಯಿ ಅವರೊಂದಿಗೆ ಸೇರಿ ಅದನ್ನು ರಕ್ಷಿಸಿದ್ದರು ಎಂದರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬರ್ದೊಲೊಯಿ ಅಸ್ಸಾಮಿನ ಪ್ರಥಮ ಮುಖ್ಯಮಂತ್ರಿಯಾಗಿದ್ದರು.

ಜಿನ್ನಾ ಭಾರತವನ್ನು ವಿಭಜಿಸಿದ್ದರು ಮತ್ತು ಮುಖರ್ಜಿ ಅಸ್ಸಾಮನ್ನು ಉಳಿಸುವ ಮೂಲಕ ಪಾಕಿಸ್ತಾನವನ್ನು ವಿಭಜಿಸಿದ್ದರು,ಹೀಗಾಗಿ ಈ ಸ್ಥಳವು ನಮಗೆ ಮಹತ್ವದ್ದಾಗಿದೆ ಎಂದ ಅವರು,ಕಿರುಕುಳಕ್ಕೊಳಗಾಗಿದ್ದ ಹೆಚ್ಚಿನ ಹಿಂದು ಬಂಗಾಳಿಗಳು ಆಶ್ರಯ ಪಡೆದುಕೊಂಡಿರುವ,ನಿರಾಶ್ರಿತರ ನಾಡು ಎಂದೂ ಕರೆಯಲಾಗುತ್ತಿರುವ ಬರಾಕ್ ಕಣಿವೆಯು ಅಸ್ಸಾಮಿನ ಭಾಗವಾಗಿದೆ ಮತ್ತು ಈ ಸ್ಥಳವು ಆರಂಭದ ದಿನಗಳಿಂದಲೂ ಬಿಜೆಪಿಯ ಸಿದ್ಧಾಂತವನ್ನು ಪೋಷಿಸಿಕೊಂಡು ಬಂದಿದೆ. ಎನ್‌ಆರ್‌ಸಿ ಪಟ್ಟಿಯಲ್ಲಿ ಹೆಸರು ಸೇರ್ಪಡಗೊಂಡಿರದಿದ್ದರೂ ಯಾವುದೇ ನಿಜವಾದ ಬಂಗಾಳಿಯನ್ನು ಪೌರತ್ವ ವಂಚಿತವಾಗಿಸುವುದಿಲ್ಲ ಎಂದರು.

 ಅಂತಿಮ ಎನ್‌ಆರ್‌ಸಿ ಪಟ್ಟಿಯಲ್ಲಿನ ಅಸಮಂಜಸತೆಗಳಿಗಾಗಿ ಹಿಂದಿನ ಸರಕಾರಗಳನ್ನು ದೂರಿದ ಅವರು,1951ರಲ್ಲಿ ಅಸಮರ್ಥತೆಗಳು ಮತ್ತು ಹಿಂದಿನ ಸರಕಾರಗಳ ಭಿನ್ನಾಭಿಪ್ರಾಯಗಳಿಂದಾಗಿ ಅಸ್ಸಾಮನ್ನು ಹೊರತುಪಡಿಸಿ ಇಡೀ ದೇಶದಲ್ಲಿ ಎನ್‌ಆರ್‌ಸಿ ಪ್ರಕ್ರಿಯೆಯನ್ನು ನಡೆಸಲಾಗಿತ್ತು. 1985ರಲ್ಲಿ ಅಸ್ಸಾಂ ಒಪ್ಪಂದ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಸರಕಾರವು ಯಶಸ್ವಿಯಾಗಿತ್ತಾದರೂ ಅದು ಎನ್‌ಆರ್‌ಸಿಯನ್ನು ಕಡೆಗಣಿಸಿತ್ತು ಮತ್ತು ಪ್ರಕ್ರಿಯೆಯನ್ನು 70 ವರ್ಷಗಳ ಕಾಲ ವಿಳಂಬಗೊಳಿಸಿತ್ತು ಎಂದರು.

ಅಂತಿಮ ಎನ್‌ಆರ್‌ಸಿ ಪಟ್ಟಿಯಲ್ಲಿನ ಸಮಸ್ಯೆಗಳನ್ನು ಕೇಂದ್ರವು ಬಗೆಹರಿಸಲಿದೆ ಎಂದು ಭರವಸೆ ನೀಡಿದರು. ಕಿರುಕುಳಕ್ಕೊಳಗಾಗಿದ್ದ ಹಿಂದುಗಳ ಜೊತೆಗೆ 2014,ಡಿಸೆಂಬರ್ 14ರವರೆಗೆ ಭಾರತಕ್ಕೆ ಬಂದಿರುವ ಎಲ್ಲ ನಿಜವಾದ ಭಾರತೀಯರ ರಕ್ಷಣೆಗೆ ಸರಕಾರವು ಬದ್ಧವಾಗಿದೆ ಎಂದರು.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಾನು ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಬಲ್ಲೆ ಎನ್ನುವುದನ್ನು ತೋರಿಸಿದ್ದಾರೆ ಎಂದೂ ರಾಮ ಮಾಧವ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News