ಮಂಗಳೂರು ವಿವಿ ಅಂತರ ಕಾಲೇಜು ಚೆಸ್ ಚಾಂಪಿಯನ್‌ಷಿಪ್: ಉಜಿರೆಯ ಎಸ್‌ಡಿಎಂ ಕಾಲೇಜಿಗೆ ಅವಳಿ ಪ್ರಶಸ್ತಿ

Update: 2019-09-21 15:22 GMT

ಉಡುಪಿ, ಸೆ.21: ಉಜಿರೆಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ತಂಡಗಳು, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ಹಾಗೂ ಉಡುಪಿ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಜಂಟಿ ಆಶ್ರಯದಲ್ಲಿ ಸಂಸ್ಥೆಯ ಪ್ರಜ್ಞಾ ಸಭಾಂಗಣದಲ್ಲಿ ನಡೆದ ಮಂಗಳೂರು ವಿವಿ ಅಂತರ ಕಾಲೇಜು ಚೆಸ್ ಟೂರ್ನಿಯಲ್ಲಿ ಪುರುಷ ಹಾಗೂ ಮಹಿಳೆಯರ ವಿಭಾಗಗಳ ಚಾಂಪಿಯನ್ ಪ್ರಶಸ್ತಿಗಳನ್ನು ಗೆದ್ದುಕೊಳ್ಳುವ ಮೂಲಕ ಪ್ರಭುತ್ವ ಮೆರೆದವು.

ಎಸ್‌ಡಿಎಂ ಪುರುಷರ ತಂಡ ಒಟ್ಟು ಆರು ಸುತ್ತಿನ ಪಂದ್ಯಗಳಲ್ಲಿ ಆರನ್ನೂ ಗೆಲ್ಲುವ ಮೂಲಕ ಗರಿಷ್ಠ 24ರಲ್ಲಿ 22.5 ಅಂಕಗಳನ್ನು ಸಂಗ್ರಹಿಸಿ ಅಗ್ರಸ್ಥಾನಿ ಯಾದರೆ, ಎಸ್‌ಡಿಎಂ ಮಹಿಳಾ ತಂಡ ಆರು ಪಂದ್ಯಗಳಲ್ಲಿ ಐದನ್ನು ಜಯಿಸಿ, ಒಂದರಲ್ಲಿ ಡ್ರಾ ಸಾಧಿಸಿ 20 ಅಂಕಗಳನ್ನು ಪಡೆದು ಚಾಂಪಿಯನ್ ಎನಿಸಿಕೊಂಡಿತು.

ಪುರುಷರ ವಿಭಾಗದಲ್ಲಿ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಕಾಲೇಜು 19 ಅಂಕಗಳೊಂದಿಗೆ ರನ್ನರ್ ಅಪ್ ಸ್ಥಾನ ಪಡೆದರೆ, ಉಡುಪಿಯ ತ್ರಿಶಾ ವಿದ್ಯಾ ಕಾಲೇಜು ಮೂರನೇ ಹಾಗೂ ಪೂರ್ಣಪ್ರಜ್ಞ ಸಂಜೆ ಾಲೇಜು ನಾಲ್ಕನೇ ಸ್ಥಾನ ಪಡೆದವು.

ವೈಯಕ್ತಿಕ ವಿಭಾಗದ ಅಗ್ರಬೋರ್ಡ್‌ನಲ್ಲಿ ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ನಾಗೇಶ್ ಪುರಾಣಿಕ್, ಎರಡನೇ ಬೋರ್ಡ್‌ನಲ್ಲಿ ತ್ರಿಶಾ ಕಾಲೇಜಿನ ಶ್ರೀಕೃಷ್ಣ, ಮೂರನೇ ಬೋರ್ಡ್‌ನಲ್ಲಿ ಎಸ್‌ಡಿಎಂ ಕಾಲೇಜಿನ ಶೇಖ್ ಮಹಮ್ಮದ್ ಇರ್ಫಾನ್, ನಾಲ್ಕನೇ ಬೋರ್ಡಿನಲ್ಲಿ ಎಸ್‌ಡಿಎಂನ ಶಬ್ದಿಕ್ ವರ್ಮ ಹಾಗೂ ಐದನೇ ಬೋರ್ಡಿನಲ್ಲಿ ಅದೇ ಕಾಲೇಜಿನ ಶಿವರಾಮ ಆಚಾರ್ಯ ಬಹುಮಾನ ಗಳನ್ನು ಜಯಸಿದರು.

ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಸೈಂಟ್ ಅಲಾಸಿಯಸ್ ಕಾಲೇಜು ರನ್ನರ್‌ಅಪ್ ಸ್ಥಾನ ಪಡೆದರೆ, ಪುತ್ತೂರಿನ ವಿವೇಕಾನಂದ ಕಾಲೇಜು ಮೂರನೇ ಹಾಗೂ ಕೋಟೇಶ್ವರದ ಎಸ್‌ಕೆವಿಎಂಎಸ್ ಕಾಲೇಜು ನಾಲ್ಕನೇ ಸ್ಥಾನಗಳನ್ನು ಗೆದ್ದುಕೊಂಡವು. ವೈಯಕ್ತಿಕ ವಿಭಾಗದಲ್ಲಿ ಕೋಟೇಶ್ವರ ಕಾಲೇಜಿನ ವಿದ್ಯಾಶ್ರೀ ಅಗ್ರಬೋರ್ಡ್‌ನಲ್ಲಿ, ಎರಡನೇ ಬೋರ್ಡಿನಲ್ಲಿ ಎಸ್‌ಡಿಎಂನ ಈಶಾ ಶರ್ಮ, ಮೂರನೇ ಬೋರ್ಡಿನಲ್ಲಿ ಆಂಡ್ರಿಯಾ ಡಿಸೋಜ ಬಹುಮಾನಗಳನ್ನು ಜಯಿಸಿದರು.

ವಿಷಯಾಧಾರಿತ ಆಯ್ಕೆ: ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ ಮಂಗಳೂರು ವಿವಿ ಕುಲಪತಿ ಪ್ರೊ. ಪ್ರೊ. ಪಿ.ಎಸ್. ಯಡಪಡಿತ್ತಾಯ ಮಾತನಾಡಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪ್ರವೇಶಕ್ಕೆ ಇನ್ನು ಮುಂದೆ ವಿಷಯ ಆಧಾರಿತ ಆಯ್ಕೆಗೆ ಅವಕಾಶ ನೀಡಲು ನಿರ್ಧರಿಸಿದ್ದು, ಇದರಲ್ಲಿ ದೈಹಿಕ ಶಿಕ್ಷಣವೂ ಒಂದು ವಿಷಯವಾಗಿರುತ್ತದೆ ಎಂದು ತಿಳಿಸಿದರು. ಈಗಾಗಲೇ ಇರುವ ಕ್ರೀಡಾ ಕೋಟಾದೊಂದಿಗೆ, ಮಂಗಳೂರು ವಿವಿ ಕ್ರೀಡಾ ನೀತಿಯಲ್ಲಿರುವ ಅಂಶಗಳು ಮುಂದುವರಿಯಲಿವೆ ಎಂದರು.

ಅದಮಾರು ಮಠಾಧೀಶರಾದ, ಅದಮಾರು ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ., ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಡಾ.ಜೇಮ್ಸ್ ಒಲಿವೇರಾ, ಪಿಐಎಂನ ಜಂಟಿ ಕಾರ್ಯದರ್ಶಿ ಡಾ.ಎಂ.ಆರ್.ಹೆಗಡೆ, ಡೆರಿಕ್ ಚೆಸ್ ಸ್ಕೂಲ್‌ನ ಡೆರಿಕ್ ಪಿಂಟೊ ಹಾಗೂ ಸುಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಿಐಎಂನ ನಿರ್ದೇಶಕ ಡಾ.ಭರತ್ ವಿ. ಅತಿಥಿಗಳನ್ನು ಸ್ವಾಗತಿಸಿದರೆ, ಡಾ.ನವೀನ್ ಕುಮಾರ್ ಕೆ.ಆರ್. ವಂದಿಸಿದರು. ಡಾ.ಭಾರತಿ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ: ಡಿ.18ರಿಂದ ಅ.ಭಾ.ಕಬಡ್ಡಿ
ಮಂಗಳೂರು ವಿವಿ ಹಾಗೂ ಪೂರ್ಣಪ್ರಜ್ಞ ಕಾಲೇಜುಗಳ ಜಂಟಿ ಆಶ್ರಯದಲ್ಲಿ ಮುಂದಿನ ಡಿ.18ರಿಂದ 20ರವರೆಗೆ ಉಡುಪಿ ಪೂರ್ಣಪ್ರಜ್ಞ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ಅಂತರ ವಿವಿ ಕಬಡ್ಡಿ ಚಾಂಪಿಯನ್‌ಷಿಪ್ ನಡೆಯಲಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಪ್ರಕಟಿಸಿದರು.

ಅದಮಾರುಶ್ರೀಗಳ ವೈಯಕ್ತಿಕ ಆಸಕ್ತಿಯಿಂದ ಅಖಿಲ ಭಾರತ ಮಟ್ಟದ ಟೂರ್ನಿಯೊಂದು ಇದೇ ಮೊಲ ಬಾರಿಗೆ ಉಡುಪಿಯಲ್ಲಿ ನಡೆಯಲಿದ್ದು, ಇದಕ್ಕಾಗಿ ಬೇಕಾದ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News