ಕುವೈತ್‌ನಲ್ಲಿ ಚಿತ್ರಹಿಂಸೆ ಅನುಭವಿಸಿದ ಬೆಂಗ್ರೆ ಮಹಿಳೆ ತಾಯ್ನಾಡಿಗೆ

Update: 2019-09-21 15:34 GMT

ಮಂಗಳೂರು, ಸೆ.21: ಕುವೈತ್‌ನಲ್ಲಿ ಸಿಲುಕಿ ಚಿತ್ರಹಿಂಸೆ ಅನುಭವಿಸಿದ್ದ ಮಹಿಳೆಯೊಬ್ಬರು ಅನಿವಾಸಿ ಭಾರತೀಯರ ಸಹಾಯ ಹಸ್ತದಿಂದ ಕೊನೆಗೂ ಭಾರತಕ್ಕೆ ಮರಳುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ.

ಮಂಗಳೂರಿನ ಬೆಂಗ್ರೆ ನಿವಾಸಿ ರೇಷ್ಮಾ ಸುವರ್ಣ ಕುವೈತ್‌ನ ಮನೆಯೊಂದರಲ್ಲಿ ದಿಗ್ಬಂಧನದಲ್ಲಿದ್ದರು. ಜನವರಿ ತಿಂಗಳಲ್ಲಿ ಕುವೈತ್‌ಗೆ ತೆರಳಿದ್ದ ಅವರು, ಸುಮಾರು ಆರು ತಿಂಗಳ ಕಾಲ ಸಂಕಷ್ಟದಲ್ಲಿ ಕೈತೊಳೆದಿದ್ದರು. ಮನೆ ತಲುಪುತ್ತೇನೋ ಇಲ್ಲವೋ ಎಂಬ ಭಯ ಅವರನ್ನು ಇನ್ನಿಲ್ಲದಂತೆ ಕಾಡಿತ್ತು. ಕುವೈತ್‌ನಲ್ಲಿದ್ದ ಅನಿವಾಸಿ ಭಾರತೀಯರ ನೆರವಿನಿಂದ ಕ್ಷೇಮವಾಗಿ ಕರಾವಳಿಗೆ ವಾಪಸಾಗಿದ್ದಾರೆ.

ಬೆಂಗ್ರೆಯ ರೇಷ್ಮಾ ಮಂಗಳೂರಿನ ಏಜೆಂಟ್‌ವೊಬ್ಬರ ಮೂಲಕ ಕುವೈತ್‌ಗೆ ಜನವರಿಯಲ್ಲಿ ತೆರಳಿದ್ದರು. ಅಲ್ಲಿನ ಕೇರಳ ಮೂಲದ ಏಜೆಂಟರು ಇವರನ್ನು ವೃದ್ಧ ದಂಪತಿಯ ಯೋಗಕ್ಷೇಮ ನೋಡುವ ಕೆಲಸಕ್ಕೆ ನಿಯೋಜಿಸಿದ್ದರು. ಅಲ್ಲಿಗೆ ತೆರಳಿದ ರೇಷ್ಮಾ ಅವರನ್ನು ದಿನಕ್ಕೆ 12ರಿಂದ 14 ಗಂಟೆಗಳವರೆಗೂ ದುಡಿಸಲಾಗುತ್ತಿತ್ತು. ವೃದ್ಧ ದಂಪತಿ ದೈಹಿಕ, ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದರು. ಎಲ್ಲ ಕಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಇವರು ಹೊರಗೆಲ್ಲೂ ಹೋಗದಂತೆ ದಿಗ್ಬಂಧನ ವಿಧಿಸಿದ್ದರು. ಈ ನಡುವೆ ರೇಷ್ಮಾ ಅವರ ಪತಿ ತೀರಿಕೊಂಡಾಗಲೂ ಅವರನ್ನು ಹೋಗಲು ಬಿಡದೆ ಕೂಡಿ ಹಾಕಿದ್ದರು ಎಂದು ಆರೋಪಿಸಲಾಗಿದೆ.

ವೃದ್ಧ ದಂಪತಿಯ ಕಿರುಕುಳ ತಾಳದೆ ವೀಡಿಯೊ ಮೆಸೆಜ್ ಮಾಡಿದ ರೇಷ್ಮಾ ಅದನ್ನು ಅನಿವಾಸಿ ಭಾರತೀಯ ರಾಜ್ ಭಂಡಾರಿ ಅವರಿಗೆ ಕಳುಹಿಸಿದ್ದರು. ಮತ್ತೋರ್ವ ಅನಿವಾಸಿ ಭಾರತೀಯ ಮೋಹನ್‌ದಾಸ್ ಕಾಮತ್ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಸೆಕೆಂಡ್ ಸೆಕ್ರೆಟರಿ ಜತೆ ಮಾತುಕತೆ ನಡೆಸಿ, ರೇಷ್ಮಾ ಅವರನ್ನು ರಾಯಭಾರಿ ಕಚೇರಿ ಕರೆತರುವ ಜವಾಬ್ದಾರಿ ವಹಿಸಿಕೊಂಡರು.

ಆದರೆ ರೇಷ್ಮಾ ಅವರನ್ನು ಮನೆಯಿಂದ ಹೊರಗೆ ಬಿಡುತ್ತಿರಲಿಲ್ಲವಾದ್ದರಿಂದ ಸಮಸ್ಯೆ ಬಿಗಡಾಯಿಸಿತ್ತು. ಕೊನೆಗೆ ಕಸ ಬಿಸಾಡಲು ಅವರು ಮನೆಯಿಂದ ಹೊರಬರುತ್ತಾರೆ ಎಂಬ ವಿಚಾರ ಗೊತ್ತಾಯಿತು. ರೇಷ್ಮಾ ಉಳಿದುಕೊಂಡಿದ್ದ ಮನೆಯಿಂದ ಅರ್ಧ ಕಿ.ಮೀ. ದೂರದಲ್ಲಿ ಮೋಹನ್‌ದಾಸ್ ಕಾರಿನ ವ್ಯವಸ್ಥೆ ಮಾಡಿದ್ದರು. ಕಸ ಬಿಸಾಡಲು ಬಂದ ರೇಷ್ಮಾ ಆ ಕಾರಿನಲ್ಲಿ ಕುಳಿತು ನೇರವಾಗಿ ರಾಯಭಾರಿ ಕಚೇರಿಗೆ ತಲುಪಿದರು.

ಕುವೈತ್‌ನಿಂದ ಶನಿವಾರ ಮಧ್ಯಾಹ್ನ ಮುಂಬೈಗೆ ಆಗಮಿಸಿದ್ದ ರೇಷ್ಮಾ, ಬಳಿಕ ಅಲ್ಲಿಂದ ಪತಿಯ ಮನೆಯಾದ ಶಿರ್ಡಿಗೆ ತೆರಳಿದ್ದಾರೆ. ರವಿವಾರ ಬೆಳಗ್ಗೆ ಅಲ್ಲಿಂದ ಮಂಗಳೂರಿಗೆ ಹೊರಡಲಿದ್ದಾರೆ ಎಂದು ತಿಳಿದುಬಂದಿದೆ.

ರೇಷ್ಮಾ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿ ಕೊಡುವಲ್ಲಿ ಅನಿವಾಸಿ ಭಾರತೀಯರಾದ ಮೋಹನ್‌ದಾಸ್, ರಾಜ್ ಭಂಡಾರಿ, ಮಾಧವ ನಾಯ್ಕ, ಫರ್ನಾಂಡಿಸ್ ಶ್ರಮಿಸಿದ್ದಾರೆ. ಇತ್ತೀಚೆಗೆ ಇದೇ ಅನಿವಾಸಿ ಭಾರತೀಯರ ತಂಡ ಕುವೈತ್‌ನಲ್ಲಿ ಸಿಲುಕಿದ್ದ ಯುವಕರ ತಂಡವನ್ನು ಹರಸಾಹಸ ಪಟ್ಟು ಭಾರತಕ್ಕೆ ಕಳುಹಿಸಿಕೊಟ್ಟಿದ್ದನ್ನು ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News