ಅನರ್ಹ ಶಾಸಕರು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದರೆ ಬಿಜೆಪಿಯಿಂದ ಕಣಕ್ಕೆ: ಡಿ.ವಿ.ಸದಾನಂದ ಗೌಡ

Update: 2019-09-21 15:55 GMT

ಉಡುಪಿ, ಸೆ.21: ರಾಜ್ಯ ಸರಕಾರ ರಚನೆಯಾದ ದಿನದಿಂದ ಉಪಚುನಾವಣೆಗೆ ಕೆಲಸ ಶುರು ಮಾಡಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸರಕಾರದ ಬಗ್ಗೆ ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳಲ್ಲಿಯೂ ಗೆಲುವು ಸಾಧಿಸಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ವಿಚಾರಣೆಯು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಒಂದೇ ದಿನದಲ್ಲಿ ಎಲ್ಲವೂ ಇತ್ಯರ್ಥ ಆಗಬಹುದು. ಕಾನೂನಿನ ಚೌಕಟ್ಟಿನಲ್ಲಿ ಶಾಸಕರಿಗೆ ಸಮಸ್ಯೆ ಉಂಟಾಗಿದೆ. ಅನರ್ಹತೆ ಹೊಂದಿದವರೇ ಮತ್ತೆ ಸ್ಪರ್ಧೆ ಮಾಡುವ ಅವಕಾಶ ಆಗುತ್ತದೆ. ಅನರ್ಹರು ಮೊದಲು ಬಿಜೆಪಿ ಸೇರ್ಪಡೆಗೊಳ್ಳಲಿ. ಆ ನಂತರ ಬಿಜೆಪಿ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದರೆ ಅವರನ್ನು ಬಿಜೆಪಿಯಿಂದ ಕಣಕ್ಕೆ ಇಳಿಸಲಾಗುವುದು ಎಂದರು.

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂಬ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ಅಧಿಕಾರಕ್ಕಾಗಿ ಜೆಡಿಎಸ್ ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ. ಕುರ್ಚಿಗಾಗಿ ಅಂತಹ ಹೇಳಿಕೆ ಸಾಮಾನ್ಯ. ಆಡಳಿತದ ಆಸೆ ಈ ಹೇಳಿಕೆ ಹೇಳಿಸಿರಬಹುದು. ಸಿದ್ದರಾಮಯ್ಯ ಅವರಿಗೆ ಮತ್ತೆ ಸಿಎಂ ಆಗುವ ಆಸೆ. ಅಧಿಕಾರಕ್ಕಾಗಿ ಸಿದ್ದರಾಮಯ್ಯ ಎಲ್ಲ ಪಕ್ಷಕ್ಕೂ ಹೋಗಿ ಬಂದರು. ಬಿಜೆಪಿಯಲ್ಲಿ ಸಿದ್ದರಾಮಯ್ಯಗೆ ಪ್ರವೇಶವಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ನೆರೆ ಪರಿಹಾರ ಸದುಪಯೋಗ ಆಗುವಾಗ ಕೇಂದ್ರದಿಂದ ಪರಿಹಾರ ನೀಡಲಾಗುವುದು. ಈಗಾಗಲೇ ಕೇಂದ್ರ ಎಸ್‌ಡಿಆರ್‌ಎಫ್‌ನಿಂದ 380 ಕೋಟಿ ರೂ. ನೀಡಲಾಗಿದೆ. ನೆರೆ ನಷ್ಟದ ವರದಿಗಳನ್ನು ಗೃಹ ಇಲಾಖೆ ಪಡೆದುಕೊಂಡಿದೆ. ತಾತ್ಕಾಲಿಕ ಪರಿಹಾರಕ್ಕೆ ರಾಜ್ಯದಲ್ಲಿ ಹಣ ಇದೆ ಎಂದು ಅವರು ಹೇಳಿದರು.

ರಾಜ್ಯದ ಬೊಕ್ಕಸದಲ್ಲಿ ಸಾಕಷ್ಟು ಹಣ ಇರುವುದರಿಂದ ಕೇಂದ್ರದ ನೆರೆ ಪರಿಹಾರ ಬೇಡ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ಸಂಸದರು ಈಗ ಪರಿಹಾರ ಬೇಡ ಅಂದಿರಬಹುದು. ಶಾಶ್ವತ ಕಾಮಗಾರಿಗೆ ಕೇಂದ್ರದ ಅನುದಾನ ಅವಶ್ಯಕ. ಅಷ್ಟು ದೊಡ್ಡ ಮೊತ್ತ ಕೇಂದ್ರದಿಂದ ಕೊಡಲು ಮಾತ್ರ ಸಾಧ್ಯ ಎಂದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಚಾರ ತನಿಖೆ ನಡೆಯುತ್ತಿರುವಾಗ ನಾನು ಮಾತನಾಡುವುದಿಲ್ಲ. ತಪ್ಪುಮಾಡಿದವರ ಮೇಲೆ ಕಾರ್ಯಾಚರಣೆ ನಡೆಯಲೇಬೇಕು. ಬಿಜೆಪಿಯವರು ತಪ್ಪುಮಾಡಿದರೂ ಕೂಡ ಅವರ ಮೇಲೆಯೂ ಕಾರ್ಯಾಚರಣೆ ಆಗಲಿ. ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ತನಿಖಾ ಸಂಸ್ಥೆ ನಿರ್ಧರಿಸುತ್ತದೆ. ಆದರೆ ಈ ವಿಚಾರದಲ್ಲಿ ಆಡಳಿತ ಪಕ್ಷದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಆರೋಪ ಸಾಬೀತು ಪಡಿಸುವುದು ಸವಾಲಿನ ಕೆಲಸವಾಗಿದೆ ಎಂದು ಸಚಿವ ಸದಾನಂದ ಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News