ಉಡುಪಿ: ಪಾರ್ಕಿಂಗ್-ನೋಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲು ಡಿಸಿ ಸೂಚನೆ

Update: 2019-09-21 17:05 GMT

ಉಡುಪಿ, ಸೆ.21: ಉಡುಪಿ-ಮಣಿಪಾಲದಲ್ಲಿ ಪಾರ್ಕಿಂಗ್ ಮತ್ತು ಸಂಚಾರ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಪಾರ್ಕಿಂಗ್ ಮತ್ತು ನೋ ಪಾರ್ಕಿಂಗ್ ವ್ಯವಸ್ಥೆಯನ್ನು ಕ್ರಮಬದ್ದಗೊಳಿಸಲು ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಹಲವೆಡೆ ರಸ್ತೆ ಬದಿಯಲ್ಲಿಯೇ ವಾಹನಗಳ ಪಾರ್ಕಿಂಗ್‌ನಿಂದಾಗಿ ಪಾದಾಚಾರಿಗಳಿಗೆ ಮತ್ತು ಇತರ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ವಾಹನಗಳ ಪಾರ್ಕಿಂಗಿಗೆ ಸೂಕ್ತ ಸ್ಥಳಾವಕಾಶ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣ. ಈ ಹಿನ್ನೆಲೆಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧಿಸಲು ಅಧಿಸೂಚನೆ ಹೊರಡಿಸಬೇಕಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ವಾಹನಗಳನ್ನು ಪಾರ್ಕ್ ಮಾಡಲು ಸ್ಥಳವನ್ನು ಗುರುತಿಸಬೇಕು ಹಾಗೂ ಸಾಧ್ಯವಾದಲ್ಲಿ ಬಹು ಹಂತದ ಪಾರ್ಕಿಂಗ್ ಕಟ್ಟಡವನ್ನು ನಿರ್ಮಿಸಬೇಕು ಎಂದ ಜಿಲ್ಲಾಧಿಕಾರಿ, ಈ ನಿಟ್ಟಿನಲ್ಲಿ ನಗರಸಭೆ, ಆರ್‌ಟಿಒ ಹಾಗೂ ಪೋಲೀಸ್ ಇಲಾಖೆ ಜಂಟಿಯಾಗಿ ಸಮೀಕ್ಷೆ ನೆಸಿ ವರದಿ ನೀಡುವಂತೆ ಸೂಚಿಸಿದರು.

ಉಡುಪಿ-ಹೆಬ್ರಿ-ಕಾರ್ಕಳ ರಸ್ತೆ ಸೇರಿದಂತೆ ಪ್ರಮುಖ ಹೆದ್ದಾರಿಗಳ ಹೊಂಡ-ಗುಂಡಿಗಳು ಸುಗಮ ಸಂಚಾರಕ್ಕೆ ಅಡ್ಡಿಯಾಗು ತ್ತಿದ್ದು, ಆದ್ಯತೆಯ ಮೇರೆಗೆ ಗುಂಡಿಮುಚ್ಚುವಂತೆ ಲೋಕೋಪಗಿ ಇಲಾಖಾಧಿಕಾರಿಗಳಿಗೆ ಆದೇಶಿಸಿದರು.

ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳಲ್ಲಿ ದಾರಿದೀಪಗಳು ಇಲ್ಲದಿರುವುದರಿಂದ ರಾತ್ರಿ ವೇಳೆ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆ ಗಳಾಗುತ್ತಿದ್ದು, ಆದಷ್ಟು ಬೇಗನೆ ದಾರಿದೀಪ ಅಳವಡಿಸುವ ಕಾರ್ಯ ಕೈಗೊಳ್ಳಬೇಕೆಂದು ಸೂಚಿಸಿದರು. ಉಡುಪಿ-ಹೆಬ್ರಿ-ಕಾರ್ಕಳ ರಸ್ತೆ ಸೇರಿದಂತೆ ಪ್ರಮುಖ ಹೆದ್ದಾರಿಗಳ ಹೊಂಡ-ಗುಂಡಿಗಳು ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಆದ್ಯತೆಯ ಮೇರೆಗೆ ಗುಂಡಿಮುಚ್ಚುವಂತೆ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಆದೇಶಿಸಿದರು.

ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ: ಹದಿನೆಂಟು ವರ್ಷಕ್ಕಿಂತ ಕೆಳಗಿನ ಮಕ್ಕಳು ರಸ್ತೆ ಸುರಕ್ಷತೆ ಕಾನೂನುಗಳನ್ನು ಮೀರಿ ಶಾಲೆಗಳಿಗೆ ವಾಹನಗಳನ್ನು ತಾವೇ ಚಲಾಯಿಸುವಂತಹ ಘಟನೆಗಳು ಕಂಡುಬರುತ್ತಿದ್ದು, ಇಂತಹ ಪ್ರಕರಣಗಳು ಪತ್ತೆಯಾದಲ್ಲಿ ವಿದ್ಯಾರ್ಥಿಯು ಕಲಿಯುತ್ತಿರುವ ವಿದ್ಯಾಸಂಸ್ಥೆಗಳ ವಿರುದ್ಧವೆ ಕಾನೂನು ಕ್ರಮ ಕೈಗೊಳ್ಳಲು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಲು ಜಂಕ್ಷನ್‌ಗಳನ್ನು ಗುರುತಿಸಲಾಗಿದೆ ಮತ್ತು ಪಾರ್ಕಿಂಗ್ ವ್ಯವಸ್ಥೆಗಾಗಿ ಸ್ಥಳ ಗುರುತಿಸುವ ಕೆಲಸವನ್ನು ಸರ್ವೆ ಮೂಲಕ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಸಭೆಗೆ ತಿಳಿಸಿದರು.

ಪರ್ಕಳ-ಮಲ್ಪೆ ಹೆದ್ದಾರಿ ಬದಿ ಇರುವ ಮರಗಳನ್ನು ಕಡಿಯದೆ ಅವುಗಳನ್ನು ಮರು ನೆಡಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಸಾಧ್ಯವೆ ಎನ್ನುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಆರ್‌ಟಿಒ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News