3 ಚಿಂಪಾಂಜಿ ವಶಕ್ಕೆ ಪಡೆದ ಈ.ಡಿ.: ಕಾರಣವೇನು ಗೊತ್ತಾ ?

Update: 2019-09-21 17:47 GMT

ಹೊಸದಿಲ್ಲಿ, ಸೆ.21: ಹಿರಿಯ ಅರಣ್ಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ದಾಖಲೆಪತ್ರ ತಯಾರಿಸಿ ಮೃಗಾಲಯದಿಂದ 75 ಲಕ್ಷ ರೂ. ಮೌಲ್ಯದ 3 ಚಿಂಪಾಂಜಿ ಹಾಗೂ 6 ಲಕ್ಷ ರೂ. ಮೌಲ್ಯದ ನಾಲ್ಕು ಅಪರೂಪದ ತಳಿಯ ಕೋತಿಗಳನ್ನು ಸಾಗಿಸಲು ಪ್ರಯತ್ನಿಸಿದ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ.

ಈ ರೀತಿಯ ಪ್ರಕರಣ ದೇಶದಲ್ಲಿಯೇ ಮೊದಲ ಬಾರಿಗೆ ದಾಖಲಾಗಿದ್ದು, ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ತನಿಖೆ ನಡೆಸುತ್ತಿದೆ. ಕೋಲ್ಕತಾ ನಿವಾಸಿ ಸುಪ್ರದೀಪ್ ಗುಹಾ ಎಂಬಾತ ಈ ಪ್ರಕರಣದ ಆರೋಪಿಯಾಗಿದ್ದಾನೆ. ಕೋಲ್ಕತಾದ ಅಲಿಪೋರ್ ಝುವಾಲಾಜಿಕಲ್ ಗಾರ್ಡನ್‌ನಲ್ಲಿ ಈ ಚಿಂಪಾಂಜಿಗಳು ಹಾಗೂ ದಕ್ಷಿಣ ಅಮೆರಿಕಾದಲ್ಲಿ ಕಂಡುವರುವ ಅಪರೂಪದ ತಳಿಯ ಕೋತಿಗಳಿದ್ದು ಇವು ಪ್ರವಾಸಿಗರಿಗೆ ಆಕರ್ಷಣೆಯ ವಿಷಯಗಳಾಗಿದ್ದವು.

ಹಿರಿಯ ಅರಣ್ಯಾಧಿಕಾರಿಗಳ ಹೆಸರಿನಲ್ಲಿ ತಯಾರಿಸಿದ ನಕಲಿ ಅನುಮತಿ ಪತ್ರ ತೋರಿಸಿ ಈ ಪ್ರಾಣಿಗಳನ್ನು ಮೃಗಾಲಯದಿಂದ ಸಾಗಿಸಲು ಗುಹಾ ಪ್ರಯತ್ನಿಸಿದ್ದ. ಆದರೆ ಪಶ್ಚಿಮ ಬಂಗಾಳದ ವನ್ಯಜೀವಿ ಮಂಡಳಿ ಹಾಗೂ ಪೊಲೀಸರಿಗೆ ಅನುಮಾನ ಬಂದು ಈತನನ್ನು ವಶಕ್ಕೆ ಪಡೆದು ಎಫ್‌ಐಆರ್ ದಾಖಲಿಸಿ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.

ಗುಹಾ ಓರ್ವ ಚಾಣಾಕ್ಷ ಕ್ರಿಮಿನಲ್ ಆಗಿದ್ದು, ಕಸ್ಟಮ್ಸ್ ಅಧಿಕಾರಿಗಳ ಎದುರು ಹಾಗೂ ವನ್ಯಜೀವಿ ಮಂಡಳಿ ಅಧಿಕಾರಿಗಳ ಎದುರು ವಿಭಿನ್ನ ಹೇಳಿಕೆ ನೀಡಿ ಬಚಾವಾಗಲು ಪ್ರಯತ್ನಿಸಿದ್ದ. ವಿಚಾರಣೆ ಸಂದರ್ಭ ಈತ ವನ್ಯಜೀವಿ ಅಕ್ರಮ ಸಾಗಾಟದ ವ್ಯವಸ್ಥಿತ ಜಾಲವೊಂದನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈತನಿಂದ ವಶಕ್ಕೆ ಪಡೆದ ಚಿಂಪಾಂಜಿ ಹಾಗೂ ಕೋತಿಗಳನ್ನು ಮೃಗಾಲಯಕ್ಕೆ ಮರಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News