ರಸ್ತೆ ಅವ್ಯವಸ್ಥೆ: ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

Update: 2019-09-21 18:23 GMT

ಬಜಪೆ, ಸೆ.21: ಮಳವೂರಿನಿಂದ ಬಜಪೆ ಕಡೆಗೆ ಸಾಗುವ ರಾಜ್ಯ ಹೆದ್ದಾರಿ 67 ರ ಅಂತೊನಿ ಕಟ್ಟೆ ಎಂಬಲ್ಲಿನ ರಸ್ತೆಯ ಅಂಚುಗಳು ಕುಸಿದಿದ್ದು, ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಮಳವೂರಿನಿಂದ ಬಜಪೆ ಕಡೆಗೆ ಸಾಗುವ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳು ಈ ರಸ್ತೆಯ ಮೂಲಕವೇ ಸಾಗುತ್ತದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರ ಪಾಲಿಗೆ ಬಹಳಷ್ಟು ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂತೊನಿಕಟ್ಟೆ ಎಂಬಲ್ಲಿನ ರಸ್ತೆಯು ತೀರಾ ತಿರುವಿನಿಂದ ಕೂಡಿದ್ದು, ರಸ್ತೆಯ ಅಂಚುಗಳ ಪ್ರದೇಶವು ತೀರಾ ಇಳಿಜಾರು ಹಾಗೂ ಬಹಳಷ್ಟು ಆಳವಾದ ಪ್ರದೇಶವಾಗಿದೆ. ಈ ಆಳವಾದ ಪ್ರದೇಶವನ್ನು ಸಮತಟ್ಟು ಮಾಡಲಾಗಿದ್ದು, ರಸ್ತೆ ಸಮೀಪದ ಮಣ್ಣು ಕುಸಿದಿದೆ. ಪರಿಣಾಮ ದೊಡ್ಡ ಗಾತ್ರದ ಹೊಂಡ ಸೃಷ್ಟಿಯಾಗಿದೆ. ಈ ಭಾರೀ ಗಾತ್ರದ ಹೊಂಡಕ್ಕೆ ದೊಡ್ಡ ದೊಡ್ಡ ಗಾತ್ರದ ಬಂಡೆ ಕಲ್ಲುಗಳನ್ನು ಮಾತ್ರ ಹಾಕಲಾಗಿದೆ. ಈ ಇಳಿಜಾರಿನಿಂದ ಕೂಡಿದ ಪ್ರದೇಶದಲ್ಲಿ ಹಲವಾರು ಮನೆಗಳಿದ್ದು, ಸ್ಥಳೀಯರು ಭಯದಿಂದಲೇ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ರಸ್ತೆಯ ಸಮೀಪ ಚರಂಡಿ ವ್ಯವಸ್ಥೆ ಕೂಡ ಸಮರ್ಪಕ ರೀತಿಯಲ್ಲಿ ಇಲ್ಲ. ಅಲ್ಲದೇ, ಸಮೀಪದ ಮೋರಿಯೊಂದರಲ್ಲಿ ಕಸ, ತ್ಯಾಜ್ಯ ಕೂಡ ತುಂಬಿಹೋಗಿದ್ದು, ರಾಜ್ಯ ಹೆದ್ದಾರಿಯ ರಸ್ತೆಯ ಅಂಚುಗಳ ಸಮೀಪ ಬ್ಯಾರಿಕೇಡ್ ಗಳನ್ನು ಇಡಲಾಗಿದೆ. ಇದರ ಸಮೀಪವೇ ಕಸ, ಬಾಟಲ್ ಗಳು ರಾಶಿ ಬಿದ್ದಿದೆ ಎಂದು ಸ್ಥಳೀಯರೊಬ್ಬರು ದೂರಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News