ಗನ್ ಹಿಡಿದು ನಡೆದಾಡುವ ‘ಕಾಲ’ ಬಾರದಂತೆ ಜಾಗೃತರಾಗಿ: ಮಹೇಂದ್ರ ಕುಮಾರ್

Update: 2019-09-22 07:17 GMT

ಮಂಗಳೂರು, ಸೆ.22: ದ.ಕ. ಜಿಲ್ಲೆಯ ವಾತಾವರಣ ಸುಧಾರಿಸಿಲ್ಲ. ಹಿಂದೂ-ಮುಸ್ಲಿಮ್ ಮಕ್ಕಳು ಪರಸ್ಪರ ಮುಖ ನೋಡದಂತಹ ಪರಿಸ್ಥಿತಿ ಮುಂದುವರಿದಿರುವುದು ವಿಷಾದನೀಯ. ಪೊಲೀಸರು, ಕಾನೂನು ಯಾವುದರ ಅಗತ್ಯವಿಲ್ಲ ಎಂಬಂತಹ ವಾತಾವರಣವಿದೆ. ಇದು ಆರೆಸ್ಸೆಸ್‌ನ ಸಂಚಿನ ಭಾಗವಾಗಿದ್ದು, ಹೀಗೆ ಮುಂದುವರಿದರೆ ಮುಂದೊಂದು ದಿನ ಗನ್ ಹಿಡಿದು ನಡೆದಾಡುವ ‘ಕಾಲ’ ಮಂಗಳೂರಿನಲ್ಲೂ ಬಂದೀತು. ಹೀಗಾಗದಂತೆ ಯುವ ಜನತೆ ಜಾಗೃತರಾಗಬೇಕಾಗಿದೆ ಎಂದು ಸಾಮಾಜಿಕ ಚಿಂತಕ, ಹೋರಾಟಗಾರ ಮಹೇಂದ್ರ ಕುಮಾರ್ ಹೇಳಿದ್ದಾರೆ.

‘ಉದ್ಯೋಗ ಸೃಷ್ಟಿಸಿ, ನಿರುದ್ಯೋಗದಿಂದ ರಕ್ಷಿಸಿ, ಜೀವನ ಭದ್ರತೆಯ ಉದ್ಯೋಗ, ಘನತೆಯ ಬದುಕಿಗಾಗಿ’ ಎಂಬ ಘೋಷವಾಕ್ಯದೊಂದಿಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ರವಿವಾರ ನಡೆದ ಡಿವೈಎಫ್‌ಐ 12ನೇ ನಗರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ದೇಶಭಕ್ತಿಯ ಹೆಸರಿನಲ್ಲಿ ಆರೆಸ್ಸೆಸ್‌ನವರು ಮುಸ್ಲಿಮರನ್ನು, ಪಾಕಿಸ್ತಾನವನ್ನು ದ್ವೇಷಿಸುವಂತೆ ಮಾಡುತ್ತಾರೆ. ಹಿಂದೂ, ಮುಸ್ಲಿಮರ ಮಧ್ಯೆ ಗೋಡೆ ಕಟ್ಟುತ್ತಾರೆ. ದೇಶ ಕಟ್ಟಲು ಹೊರಟವರು ಯಾಕೆ ಈ ರೀತಿಯ ಗೋಡೆ ಕಟ್ಟಬೇಕು. ಇದು ಅವರ ದೇಶಭಕ್ತೀನಾ?. ಸಂಸಾರ ನಡೆಸಲು ಗೊತ್ತಿಲ್ಲದ, ಜೋಳಿಗೆ ಹಾಕಿಕೊಂಡ ಮನುಷ್ಯನಿಗೆ ದೇಶವನ್ನು ಆಳಲು ಕೊಟ್ಟರೆ ಆರ್ಥಿಕ ಕುಸಿತವಲ್ಲದೆ ಮತ್ತಿನ್ನೇನು ಆದೀತು? ಎಂದು ಪ್ರಶ್ನಿಸಿದ ಮಹೇಂದ್ರ ಕುಮಾರ್, ಹಿಂದೂ ಧರ್ಮದಲ್ಲಿ ದಲಿತರನ್ನು ಹೇಗೆ ತುಳಿಯಲಾಗುತ್ತಿದೆಯೋ ಅದೇ ರೀತಿ ಆರೆಸ್ಸೆಸ್‌ನಲ್ಲಿ ಬಜರಂಗ ದಳವನ್ನು ತುಳಿಯಲಾಗುತ್ತದೆ. ಇದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ಡಿವೈಎಫ್‌ಐ ನಗರ ಅಧ್ಯಕ್ಷ ನವೀನ್ ಬೊಲ್ಪುಗುಡ್ಡೆ ಧ್ವಜಾರೋಹಣಗೈದರು, ಡಿವೈಎಫ್‌ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಯುವತಿಯರ ಉಪ ಸಮಿತಿಯ ರಾಜ್ಯ ಸಹ ಸಂಚಾಲಕಿ ಆಶಾ ಬೋಳೂರ್, ಡಿವೈಎಫ್‌ಐ ನಗರ ಕಾರ್ಯದರ್ಶಿ ಸಾದಿಕ್ ಕಣ್ಣೂರು ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News