ನೀರಿನ ಬಿಲ್ ಬಾಕಿ ಪ್ರಕರಣ: ಸಂಪೂರ್ಣ ಪಟ್ಟಿ ನೀಡಲು ಬಿಲ್ ವಸೂಲಿದಾರರಿಗೆ ಅಂತಿಮ ಗಡುವು

Update: 2019-09-22 08:33 GMT

ಉಪ್ಪಿನಂಗಡಿ, ಸೆ.22: 34ನೇ ನೆಕ್ಕಿಲಾಡಿ ಗ್ರಾಪಂಗೆ ಲಕ್ಷಾಂತರ ರೂ. ಕುಡಿಯುವ ನೀರಿನ ಬಿಲ್ ಪಾವತಿಯಾಗಲು ಬಾಕಿಯಿದೆ. ನೀರಿನ ಬಿಲ್ ಬಾಕಿ ಉಳಿಸಿಕೊಂಡವರ ಸಂಪೂರ್ಣ ಪಟ್ಟಿಯನ್ನು ನೀಡಲು ಬಿಲ್ ವಸೂಲಿಗಾರರು ವಿಫಲರಾಗಿದ್ದು, ಈ ಹಿನ್ನೆಲೆಯಲ್ಲಿ ಮೂರನೇ ಬಾರಿ ಅವಕಾಶ ನೀಡಿ ಹತ್ತು ದಿನಗಳ ಅಂತಿಮ ಗಡುವು ನೀಡಲಾಗಿದೆ. ತಪ್ಪಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಪಂ ನಿರ್ಧರಿಸಿದೆ.

ಗ್ರಾಪಂ ಅಧ್ಯಕ್ಷೆ ರತಿ ಎಸ್. ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗ್ರಾಪಂಗೆ ಲಕ್ಷಾಂತರ ರೂ. ಕುಡಿಯುವ ನೀರಿನ ಬಿಲ್ ಪಾವತಿಗೆ ಬಾಕಿಯಿದೆ. ಈ ಬಗ್ಗೆ ಬಿಲ್ ವಸೂಲಿಗಾರರು ನೀಡಿರುವ ನೀರಿನ ಬಿಲ್‌ನ ಹಣದ ಲೆಕ್ಕ ಹಾಗೂ ಕಡತ ಪುಸ್ತಕದಲ್ಲಿ ನಮೂದಾಗಿರುವ ಬಾಕಿ ಮೊತ್ತಕ್ಕೂ ತಾಳೆಯಾಗುತ್ತಿಲ್ಲ ಎಂದು ಗ್ರಾಪಂ ಪಿಡಿಒ ಜಯಪ್ರಕಾಶ್ ಈ ಹಿಂದಿನ ಸಭೆಯಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಬಾಕಿ ಮೊತ್ತದ ಬಗ್ಗೆ ಏಳು ದಿನಗಳೊಳಗೆ ವಿವರವಾದ ಮಾಹಿತಿ ನೀಡುವಂತೆ ಬಿಲ್ ವಸೂಲಿಗಾರರಿಗೆ ಸಭೆ ಸೂಚಿಸಿತ್ತು. ಆದರೆ ಈ ಗಡುವಿನೊಳಗೆ ಬಿಲ್ ವಸೂಲಿಗಾರರು ಲೆಕ್ಕಪತ್ರ ಒಪ್ಪಿಸಿರಲಿಲ್ಲ. ಮತ್ತೆ ಒಂದು ವಾರ ಕಾಲಾವಕಾಶ ನೀಡಿ ಸೆ.21ರಂದು ನೀರಿನ ಬಿಲ್‌ನ ಲೆಕ್ಕಪತ್ರ ಪರಿಶೀಲನಾ ಸಭೆ ಕರೆಯಲಾಗುವುದು. ಈ ಸಂದರ್ಭ ತಂದೊಪ್ಪಿಸುವಂತೆ ಸೂಚಿಸಿದ್ದರು. ಅದರಂತೆ ಶನಿವಾರ ನಡೆದ ಸಭೆಯಲ್ಲೂ ಬಿಲ್ ವಸೂಲಿಗಾರರು ಸಲ್ಲಿಸಿದ್ದ ಬಾಕಿ ಪಟ್ಟಿ ಅಪೂರ್ಣವಾಗಿದ್ದರಿಂದ ಸದಸ್ಯರು ಆಕ್ರೋಶ ವ್ಯಕ್ತವಾಯಿತು.

ಗ್ರಾಪಂ ಪಿಡಿಒ ಜಯಪ್ರಕಾಶ್ ಮಾತನಾಡಿ, ಬಿಲ್ ವಸೂಲಿಗಾರರಿಗೆ ಅಗತ್ಯಬಿದ್ದರೆ ರಜೆ ಬೇಕಾದರೂ ಪಡೆಯಿರಿ. ಉಳಿದ ಗ್ರಾಪಂ ಸಿಬ್ಬಂದಿಯ ನೆರವು ಬೇಕಾದಲ್ಲಿ ಪಡೆಡೆದುಕೊಳ್ಳಿ. ಒಟ್ಟಿನಲ್ಲಿ ಸಭೆಯ ದಿನ ಬಿಲ್ ಬಾಕಿ ಉಳಿಸಿದವರ ಪಟ್ಟಿ ಸಿದ್ಧವಾಗಿರಬೇಕು ಎಂದಿದ್ದೆ. ಇಷ್ಟೊಂದು ಅವಕಾಶ ನೀಡಿದರೂ ಬಿಲ್ ವಸೂಲಿಗಾರರು ಪರಿಪೂರ್ಣವಾದ ಪಟ್ಟಿಯನ್ನು ನೀಡಿಲ್ಲ. 34 ನೆಕ್ಕಿಲಾಡಿ ಗ್ರಾಪಂ ವ್ಯಾಪ್ತಿಯಲ್ಲಿ 560 ನೀರಿನ ಸಂಪರ್ಕ ಕಲ್ಪಿಸಲಾಗಿದೆ. 2018-19ನೇ ವರದಿ ವರ್ಷದ ಮಾರ್ಚ್ ಅಂತ್ಯಕ್ಕೆ ಒಟ್ಟು 2,33,460 ರೂ. ನೀರಿನ ಬಿಲ್ ಬರಲು ಬಾಕಿ ಇದೆ. ಇದೀಗ ಬಿಲ್ ವಸೂಲಿಗಾರರು 514 ಕುಡಿಯುವ ನೀರು ಸಂಪರ್ಕದ ಬಾಕಿಯಿರುವ ಹಣದ ಮೊತ್ತವನ್ನು ಮಾತ್ರ ನೀಡಿದ್ದಾರೆ. 514 ಸಂಪರ್ಕದಲ್ಲಿ 1,52,130 ರೂ. ವಸೂಲಿಗೆ ಬಾಕಿ ಇದೆ. 2,33,460 ರೂ.ನಲ್ಲಿ 1,52,130 ಕಳೆದರೂ ಇನ್ನೂ 81,330 ರೂ. ಬರಲು ಬಾಕಿಯಿದೆ. 46 ನೀರು ಸಂಪರ್ಕದ ಬಾಕಿ ಉಳಿದಿರುವ ಮೊತ್ತದ ಪಟ್ಟಿಯನ್ನು ನೀಡಲು ಬಾಕಿಯಿದ್ದು, ಅದು 81,330 ರೂ. ಮೊತ್ತಕ್ಕೆ ತಾಳೆಯಾಗುತ್ತದೆಯೋ ಪರಿಶೀಲಿಸಬೇಕಿದೆ ಎಂದರು.

ಈ ವೇಳೆ ಬಿಲ್ ವಸೂಲಿಗಾರರನ್ನು ತೀವ್ರ ತರಾಟೆಗೈದ ಸದಸ್ಯರು, 2018-19ನೇ ಮಾರ್ಚ್ ಅಂತ್ಯದವರೆಗಿನ ಬಾಕಿ ಪಟ್ಟಿಯೇ ಸಿದ್ಧವಾಗಿಲ್ಲ. 2019-20ನೇ ಸಾಲಿನಲ್ಲೂ ಈವರೆಗೆ ಹಲವು ಬಿಲ್‌ಗಳು ಬರಲು ಬಾಕಿಯಿವೆ. ಇಷ್ಟೊಂದು ಮೊತ್ತದ ಬಿಲ್ ಗ್ರಾಪಂಗೆ ಪಾವತಿಯಾಗದೇ ಇರಲು ಕಾರಣವೇನು? ಎಂದು ಪ್ರಶ್ನಿಸಿದರು. ಮುಂದಿನ 10 ದಿನಗಳೊಳಗೆ 2018-19ನೇ ಸಾಲಿನ ಮಾರ್ಚ್ ಅಂತ್ಯದವರೆಗೆ ಹಾಗೂ 2019-20ನೇ ಸಾಲಿನಲ್ಲಿ ಸೆಪ್ಟಂಬರ್ ಕೊನೆಯವರೆಗೆ ಗ್ರಾ.ಪಂ.ನ ಎಲ್ಲಾ ಕುಡಿಯುವ ನೀರಿನ ಸಂಪರ್ಕದಾರರಿಂದ ಎಷ್ಟು ಬಿಲ್ ಬರಲು ಬಾಕಿಯಿದೆ ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು. ತಪ್ಪಿದ್ದಲ್ಲಿ ಈ ಬಗ್ಗೆ ತನಿಖೆಗೆ ದ.ಕ. ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಬರೆಯಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಅಸ್ಗರ್ ಅಲಿ, ಸದಸ್ಯರಾದ ಎನ್. ಶೇಕಬ್ಬ, ಅನಿ ಮಿನೇಜಸ್, ಬಾಬು, ಮೈಕಲ್ ವೇಗಸ್, ಪ್ರಶಾಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News