ಬ್ಯಾಂಕ್ ವಿಲೀನ ವಿರೋಧಿಸಿ ಸೆಪ್ಟೆಂಬರ್ 26, 27 ರಂದು ಬ್ಯಾಂಕ್ ನೌಕರರ ಮುಷ್ಕರ

Update: 2019-09-22 11:54 GMT

ಚೆನ್ನೈ, ಸೆ.22: ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನವನ್ನು ವಿರೋಧಿಸಿ ದೇಶಾದ್ಯಂತ ಸುಮಾರು ನಾಲ್ಕು ಲಕ್ಷ ಬ್ಯಾಂಕ್ ನೌಕರರು ಸೆಪ್ಟೆಂಬರ್ 26 ಮತ್ತು 27 ರಂದು ಮುಷ್ಕರ ನಡೆಸಲಿದ್ದಾರೆ.

"ಸೆಪ್ಟೆಂಬರ್ 26 ರಿಂದ 27 ರವರೆಗೆ, ದೇಶಾದ್ಯಂತ ನಾಲ್ಕು ಲಕ್ಷ ನೌಕರರನ್ನು ಪ್ರತಿನಿಧಿಸುವ ನಾಲ್ಕು ಸಂಘಟನೆಗಳು ಮುಷ್ಕರ ನಡೆಸಲಿವೆ. ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನವನ್ನು ನಾವು ಸಾರ್ವಜನಿಕವಾಗಿ ವಿರೋಧಿಸುತ್ತಿದ್ದೇವೆ" ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ತಮಿಳುನಾಡು ಘಟಕ ಕಾರ್ಯದರ್ಶಿ ಆರ್. ಸೇಕರನ್  ತಿಳಿಸಿದ್ದಾರೆ. 

ಈ ವಿಷಯದಲ್ಲಿ ಕೇಂದ್ರವು "ಏಕಪಕ್ಷೀಯ ಕ್ರಮ" ತೆಗೆದುಕೊಳ್ಳುತ್ತಿದೆ ಎಂದು ಆರ್. ಸೇಕರನ್ ಆರೋಪಿಸಿದರು.

ಬಾಕಿ ಇರುವ ವೇತನ ಪರಿಷ್ಕರಣೆ, ಗ್ರಾಹಕರ ಮೇಲೆ ಬ್ಯಾಂಕುಗಳು ವಿಧಿಸುವ ಸೇವಾ ಶುಲ್ಕವನ್ನು ಕಡಿತಗೊಳಿಸುವುದು ಮತ್ತು ಸಾಕಷ್ಟು ಸಿಬ್ಬಂದಿಯನ್ನು ಖಾತರಿಪಡಿಸುವುದು ಸಹ ಬ್ಯಾಂಕರ್‌ಗಳು ಕೋರಲಿದ್ದಾರೆ.

"ಮುಷ್ಕರದಲ್ಲಿ ನಾಲ್ಕು ಲಕ್ಷ ಬ್ಯಾಂಕಿಂಗ್ ಸಿಬ್ಬಂದಿ ಭಾಗವಹಿಸಲಿದ್ದು, ಒಂದು ದಿನದಲ್ಲಿ 48,000 ಕೋಟಿ ರೂ. ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ" ಎಂದು ಆರ್. ಸೇಕರನ್ ಹೇಳಿದ್ದಾರೆ.

ಗ್ರಾಹಕರಿಗೆ ಉಂಟಾಗುವ ಅನಾನುಕೂಲತೆಯ ಬಗ್ಗೆ ಕೇಳಿದಾಗ, ಅಧಿಕಾರಿ ಸಾರ್ವಜನಿಕರ ಹಿತಾಸಕ್ತಿಗಾಗಿ ಸಂಸ್ಥೆ ಪ್ರತಿಭಟಿಸುತ್ತಿದೆ ಎಂದು ಅಧಿಕಾರಿ ಪ್ರತಿಪಾದಿಸಿದರು.

"ನಾವು ಜನರಿಗಾಗಿ ಹೋರಾಡುತ್ತಿದ್ದೇವೆ. ಮುಷ್ಕರ ನಡೆಸುವುದು ನಮ್ಮ ಕೊನೆಯ ಉಪಾಯವಾಗಿದೆ. ನಾವು ಹಲವಾರು ಆಂದೋಲನಗಳನ್ನು ಮಾಡಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕ ವಲಯದ ಬ್ಯಾಂಕುಗಳು ಅಸ್ತಿತ್ವದಲ್ಲಿರಬೇಕು" ಎಂದು ಆರ್. ಸೇಕರನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News