ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ದೀಪಕ್ ಪೂನಿಯಾಗೆ ಬೆಳ್ಳಿ

Update: 2019-09-22 12:14 GMT

ನೂರ್ ಸುಲ್ತಾನ್ (ಕಜಕಿಸ್ತಾನ), ಸೆ.22:  ವಿಶ್ವ  ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ದೀಪಕ್ ಪೂನಿಯಾ ಗಾಯದ ಕಾರಣದಿಂದಾಗಿ   ಬೆಳ್ಳಿ  ಪದಕಕ್ಕೆ ತೃಪ್ತಿಪಡಬೇಕಾಯಿತು.

 ಗಾಯದ ಕಾರಣದಿಂದಾಗಿ ದೀಪಕ್ ಪೂನಿಯಾ ಫೈನಲ್ ಪಂದ್ಯದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಅವರ ಎದುರಾಳಿ ಇರಾನ್‌ನ ಒಲಿಂಪಿಕ್ ಚಾಂಪಿಯನ್ ಹಸನ್ ಯಝ್ದಾನಿ ಸುಲಭವಾಗಿ ಚಿನ್ನ ಪಡೆದರು.

ಹಿಂದಿನ ಸುತ್ತಿನಲ್ಲಿ ದೀಪಕ್ ಪೂನಿಯಾ  ಅನುಭವಿಸಿದ ಗಾಯಗಳಿಂದಾಗಿ  86 ಕೆ.ಜಿ ವಿಭಾಗದ ಕುಸ್ತಿ ಫೈನಲ್ ನಲ್ಲಿ ಚಿನ್ನದ ಪದಕದ ಹೋರಾಟದಿಂದ ಹಿಂದೆ ಸರಿದರು. ಬೆಳ್ಳಿ ಪದಕದೊಂದಿಗೆ  ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ  ಪೂನಿಯಾ ತಮ್ಮ ಅಭಿಯಾನವನ್ನು ಕೊನೆಗೊಳಿಸಿದರು.

ಕಜಕಿಸ್ತಾನದಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇದು ಭಾರತದ ನಾಲ್ಕನೇ ಪದಕವಾಗಿದ್ದು, ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಮತ್ತು ರವಿ ಕುಮಾರ್ ದಹಿಯಾ ಈ ಮೊದಲು ಕಂಚು ಗೆದ್ದಿದ್ದಾರೆ.

ಶನಿವಾರ ಸ್ವಿಟ್ಜರ್ಲೆಂಡ್‌ನ ಸ್ಟೀಫನ್ ರೀಚ್‌ಮತ್ ವಿರುದ್ಧ ಸೆಮಿಫೈನಲ್ ಪಂದ್ಯದ ವೇಳೆ ಪೂನಿಯಾ ಅವರ ಕಣ್ಣಿಗೆ ಗಾಯವಾಗಿತ್ತು. ಮೊದಲ  ಸುತ್ತಿನಲ್ಲಿ ಕಾಲಿಗೆ ಗಾಯವಾಗಿದ್ದರೂ ಮುಂದಿನ ಸುತ್ತಿನಲ್ಲಿ ಹಿಂದೆ ಸರಿಯದೆ   ಹೋರಾಟ ನಡೆಸಿದ್ದರು.  ಸೆಮಿಫೈನಲ್ ನಲ್ಲಿ ಹೋರಾಟ ನಡೆಸಿ ವಿಜಯಿಯಾಗಿದ್ದರು. 

ಸುಶೀಲ್ ಕುಮಾರ್ ಭಾರತದ ಏಕೈಕ ವಿಶ್ವ ಚಾಂಪಿಯನ್ ಆಗಿ ಉಳಿದಿದ್ದಾರೆ. 2010 ರ ಮಾಸ್ಕೋದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 66 ಕೆ.ಜಿ ತೂಕದಲ್ಲಿ ಚಿನ್ನ ಗೆದ್ದಿದ್ದರು. ರಾಹುಲ್ ಅವೇರ್ ರವಿವಾರ 61 ಕೆ.ಜಿ  ವಿಭಾಗದಲ್ಲಿ  ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News