ರಾಜ್ಯದಲ್ಲಿ ಫೋಟೋಗ್ರಫಿ ಅಕಾಡೆಮಿ ಸ್ಥಾಪನೆಗೆ ಪ್ರಯತ್ನ: ರಘುಪತಿ ಭಟ್

Update: 2019-09-22 13:47 GMT

ಉಡುಪಿ, ಸೆ.22: ರಾಜ್ಯದಲ್ಲಿ ಫೋಟೋಗ್ರಫಿ ಅಕಾಡೆಮಿ ಸ್ಥಾಪಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲು ಪ್ರಯತ್ನಿಲಾಗುವುದು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ರವಿವಾರ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ ದ.ಕ.- ಉಡುಪಿ ಜಿಲ್ಲೆ ಇದರ 29ನೆ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಕಾಡೆಮಿ ಸ್ಥಾಪನೆಯಿಂದ ಫೋಟೋಗ್ರಫಿ ಕ್ಷೇತ್ರ ಹಾಗೂ ಯುವಕರಿಗೆ ಪ್ರಯೋಜನ ಆಗಬೇಕು. ಆ ರೀತಿಯಲ್ಲಿ ಅದರ ಕರಡನ್ನು ತಯಾರಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಬೇಕು. ಅದಕ್ಕಾಗಿ ಈಗಾಗಲೇ ಸ್ಥಾಪನೆಯಾಗಿರುವ ತೆಲಂಗಾಣ ರಾಜ್ಯದ ಕರಡನ್ನು ತರಿಸಿಕೊಂಡು ಅಧ್ಯಯನ ಮಾಡಬೇಕು ಎಂದು ಅವರು ತಿಳಿಸಿದರು.

ಫೋಟೋಗ್ರಫಿ ಎಂಬುದು ಕೇವಲ ವೃತ್ತಿ ಪರತೆ ಮಾತ್ರವಲ್ಲ, ಅದು ಕೂಡ ಒಂದು ಕಲೆಯಾಗಿದೆ. ಆ ಕಲೆಯಿಂದಲೇ ಫೋಟೋಗ್ರಫಿ ಉತ್ತಮವಾಗಿ ಮೂಡಿ ಬರಲು ಸಾಧ್ಯವಾಗುತ್ತದೆ ಎಂದ ಅವರು, ಸರಕಾರ, ಕಾನೂನು, ಇಲಾಖೆಗಳ ಮೂಲಕ ಉದ್ಭವಿಸುವ ಸಮಸ್ಯೆಗಳನ್ನು ಎದುರಿಸಿ ಒಟ್ಟಾಗಿ ಹೋರಾಟ ನಡೆಸಲು ಸಂಘಟನೆ ಅತಿ ಅವಶ್ಯಕವಾಗಿದೆ. ಈ ರೀತಿಯ ಸಂಘ ಟನೆಯಿಂದ ಛಾಯಾಚಿತ್ರಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿಲ್ಸನ್ ಜಾರ್ಜ್ ಗೋನ್ಸಾಲ್ವಿಸ್ ವಹಿಸಿ ದ್ದರು. ಛಾಯಾಚಿತ್ರ ಮತ್ತು ವಸ್ತುಪ್ರದರ್ಶನವನ್ನು ಎಸ್‌ಕೆಪಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ವಾಸುದೇವ ರಾವ್ ಉದ್ಘಾಟಿಸಿದರು. ಎಸ್‌ಕೆಪಿಎ ಸಲಹಾ ಸಮಿತಿಯ ಅಧ್ಯಕ್ಷ ವಿಠಲ ಚೌಟ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾನಿಧಿಯನ್ನು ವಿತರಿಸಲಾಯಿತು. ಹಿರಿಯ ಛಾಯಾಚಿತ್ರಗ್ರಾಹಕರಾದ ಶೇಖರ್ ಕಾರ್ಕಳ, ಪಾಲಾಕ್ಷ ಪಿ.ಸುವರ್ಣ ಬೆಳ್ತಂಗಡಿ ಅವರನ್ನು ಸನ್ಮಾನಿಸಲಾಯಿತು. ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಸಿಂಧನೂರು ಸಂಘದ ವೆಂಕಟೇಶ ಕೆಂಗಲ್ ಮುಖ್ಯ ಅತಿಥಿಗಳಾಗಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ್, ಕೋಶಾಧಿಕಾರಿ ಶ್ರೀಧರ ಶೆಟ್ಟಿಗಾರ್, ಪದಾಧಿಕಾರಿಗಳಾದ ಜಯಕರ ಸುವರ್ಣ, ಜನಾರ್ದನ ಕೊಡವೂರು ಮೊದಲಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಪ್ರಮೋದ್ ಸುವರ್ಣ ಕಾಪು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕೋಶಾಧಿಕಾರಿ ಶ್ರೀಧರ್ ಶೆಟ್ಟಿಗಾರ್ ವಂದಿಸಿದರು. ಎಚ್.ಕೆ.ನಯನಾಡು ಹಾಗೂ ರಾಘವೇಂದ್ರ ಉಡುಪಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News