ಸೆ.23ರಿಂದ ಮರಳಿಗಾಗಿ ಕಟ್ಟಡ ಕಾರ್ಮಿಕರ ಧರಣಿ
Update: 2019-09-22 19:19 IST
ಉಡುಪಿ, ಸೆ.22: ಮರಳುಗಾರಿಕೆಯನ್ನು ಆರಂಭಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಸೆ.23ರಂದು ಬೆಳಿಗ್ಗೆ 11.30ಕ್ಕೆ ಉಡುಪಿ ಜಿಲ್ಲಾಧಿಕಾರಿ ಕಛೇರಿ ಎದುರು ಅನಿರ್ದಿಷ್ಟವಾದಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಮರಳುಗಾರಿಕೆ ಸೆ.20ರಂದು ಆರಂಭವಾಗುತ್ತದೆ ಎಂಬ ಶಾಸಕರ ಹೇಳಿಕೆ ಹುಸಿಯಾಗಿದೆ. ಜಿಲ್ಲೆಯ ಕಟ್ಟಡ ಕಾರ್ಮಿಕರು ಉದ್ಯೋಗವಿಲ್ಲದೇ ಸಾಕಷ್ಟು ಕಷ್ಟ-ನಷ್ಟಕ್ಕೆ ಒಳಗಾಗಿದ್ದಾರೆ. ಆದುದರಿಂದ ಜನಪ್ರತಿನಿಧಿಗಳು ತಮ್ಮ ಸರಕಾರದ ಮೂಲಕ ಶೀಘ್ರವಾಗಿ ಮರಳು ಸಮಸ್ಯೆಯನ್ನು ಬಗೆಹರಿಸಬೇಕು. ಮರಳು ತೆಗೆಯಲು ನದಿಗಿಳಿಯುವ ತನಕ ಧರಣಿಯನ್ನು ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿಯ ಸಂಚಾಲಕರಾದ ಸುರೇಶ್ ಕಲ್ಲಾಗರ ಹಾಗೂ ಶೇಖರ ಬಂಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.