ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನೆಹರು ಕಾರಣ: ಅಮಿತ್ ಶಾ

Update: 2019-09-22 14:54 GMT

ಮುಂಬೈ,ಸೆ.22: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದ ಸೃಷ್ಟಿಗೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಹೊಣೆಯಾಗಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು,1947ರಲ್ಲಿ ಅಕಾಲಿಕ ಕದನವಿರಾಮ ಘೋಷಣೆ ಅದಕ್ಕೆ ಕಾರಣವಾಗಿತ್ತು ಎಂದಿದ್ದಾರೆ.

ರವಿವಾರ ಮಹಾರಾಷ್ಟ್ರದಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡುತ್ತಿದ್ದ ಶಾ,ಭಾಗಶಃ ಕಾಶ್ಮೀರವು ಪಾಕಿಸ್ತಾನದ ಪಾಲಾಗಲು ನೆಹರೂ ಅವರೇ ಕಾರಣರಾಗಿದ್ದರು. ಅವರು ಪಾಕಿಸ್ತಾನದೊಂದಿಗೆ ಅಕಾಲಿಕ ಕದನ ವಿರಾಮವನ್ನು ಘೋಷಿಸಿರದಿದ್ದರೆ ಪಿಒಕೆ ಅಸ್ತಿತ್ವಕ್ಕೆ ಬರುತ್ತಲೇ ಇರಲಿಲ್ಲ. ನೆಹರು ಬದಲು ದೇಶದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಈ ವಿಷಯವನ್ನು ನಿಭಾಯಿಸಬೇಕಿತ್ತು. ಪಟೇಲ್ ಅವರು ನಿಭಾಯಿಸಿದ್ದ ಎಲ್ಲ ಸಂಸ್ಥಾನಗಳು ಭಾರತದ ಭಾಗಗಳಾಗಿದ್ದವು ಎಂದು ಹೇಳಿದರು.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾನದ ವಿಧಿ 370ರ ಕುರಿತಂತೆ ಬಿಜೆಪಿಯ ನಿಲುವನ್ನು ವಿವರಿಸಿದ ಅವರು,ಕಾಂಗ್ರೆಸ್‌ಗೆ ವಿಧಿ 370ರ ರದ್ದತಿಯ ಹಿಂದೆ ರಾಜಕೀಯವೇ ಕಾಣುತ್ತಿದೆ. ಆದರೆ ನಾವು ಅದನ್ನು ಹಾಗೆ ನೋಡುವುದಿಲ್ಲ. ನಮ್ಮ ಪಾಲಿಗೆ ಅದು ರಾಷ್ಟ್ರವಾದದ ವಿಷಯವಾಗಿದೆ ಎಂದರು.

 ತನ್ನ ಪಕ್ಷವು ಯಾವಾಗಲೂ ‘ ಒಂದು ದೇಶ,ಒಬ್ಬರು ಪ್ರಧಾನಿ ಮತ್ತು ಒಂದು ಸಂವಿಧಾನ ’ಎಂಬ ಪರಿಕಲ್ಪನೆಯನ್ನು ಬೆಂಬಲಿಸಿದೆ ಎಂದ ಅವರು,ನೆಹರು ಅವರ ಕ್ರಮವು ಸಂವಿಧಾನದಡಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಕ್ಕೆ ಮತ್ತು ಅಂತಿಮವಾಗಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಗೆ ಕಾರಣವಾಗಿತ್ತು. 1990-2000ರ ನಡುವಿನ 10 ವರ್ಷಗಳಲ್ಲಿ ರಾಜ್ಯದಲ್ಲಿ 40,000 ಜನರು ಕೊಲ್ಲಲ್ಪಟ್ಟಿದ್ದರು ಮತ್ತು ಕಾಶ್ಮೀರಿ ಪಂಡಿತರು,ಸೂಫಿಗಳು ಹಾಗೂ ಸಿಕ್ಖರು ರಾಜ್ಯದಿಂದ ಹೊರದಬ್ಬಲ್ಪಟ್ಟಿದ್ದರು ಎಂದರು.

ರಾಹುಲ್ ಗಾಂಧಿಯವರು ವಿಧಿ 370 ರಾಜಕೀಯ ವಿಷಯ ಎನ್ನುತ್ತಿದ್ದಾರೆ ಎಂದ ಶಾ,‘ ರಾಹುಲ್ ಬಾಬಾ,ನೀವು ಈಗಷ್ಟೇ ರಾಜಕಾರಣವನ್ನು ಪ್ರವೇಶಿಸಿದ್ದಿರಿ,ಆದರೆ ಕಾಶ್ಮೀರಕ್ಕಾಗಿ,ವಿಧಿ 370ರ ರದ್ದತಿಗಾಗಿ ಬಿಜೆಪಿಯ ಮೂರು ತಲೆಮಾರುಗಳು ಪ್ರಾಣ ತೆತ್ತಿವೆ. ಅದು ನಮ್ಮ ಪಾಲಿಗೆ ರಾಜಕೀಯ ವಿಷಯವಲ್ಲ. ಅದು ಭಾರತ ಮಾತೆಯನ್ನು ಅಖಂಡವಾಗಿರಿಸುವ ನಮ್ಮ ಗುರಿಯ ಭಾಗವಾಗಿದೆ ’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News