ಕಾರು ಢಿಕ್ಕಿಯಾಗಿ ಮೂವರು ಮೃತ್ಯು: ಅರ್ಜುನ ಪ್ರಶಸ್ತಿ ಪುರಸ್ಕೃತ ಗಿಲ್ ವಿರುದ್ಧ ಪ್ರಕರಣ

Update: 2019-09-22 15:18 GMT

  ಬಾರ್ಮೇರ್,ಸೆ.22: ನ್ಯಾಷನಲ್ ರ್ಯಾಲಿ ಚಾಂಪಿಯನ್‌ಶಿಪ್ ಸ್ಪರ್ಧೆಯ ಸಂದರ್ಭ ದಂಪತಿ ಮತ್ತು ಪುತ್ರ ಸೇರಿದಂತೆ ಮೂವರನ್ನು ಬಲಿ ತೆಗೆದುಕೊಂಡಿರುವ ಅಪಘಾತಕ್ಕೆ ಸಂಬಂಧಿಸಿದಂತೆ ಅರ್ಜುನ ಪ್ರಶಸ್ತಿ ಪುರಸ್ಕೃತ ಗೌರವ ಗಿಲ್ ಮತ್ತು ಇನ್ನೋರ್ವ ಚಾಲಕನ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಮ್ಯಾಕ್ಸ್‌ಪೀರಿಯನೇಸ್, ಮಹೀಂದ್ರಾ,ಜೆ.ಕೆ.ಟೈರ್ಸ್,ಎಂಆರ್‌ಎಫ್ ಟೈರ್ಸ್ ಮತ್ತು ಫೆಡರೇಷನ್ ಆಫ್ ಮೋಟರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾಗಳನ್ನೂ ಎಫ್‌ಐಆರ್‌ನಲ್ಲ್ಲಿ ಹೆಸರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಮೃತ ದಂಪತಿಯ ಹಿರಿಯ ಪುತ್ರ ರಾಹುಲ್ ನೀಡಿರುವ ದೂರಿನ ಮೇರೆಗೆ ರವಿವಾರ ಬೆಳಗಿನ ಜಾವ ಸಮ್ದಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನರೇಂದ್ರ ಕುಮಾರ ಮತ್ತು ಅವರ ಪತ್ನಿ ಪುಷ್ಪಾ ದೇವಿ ರಸ್ತೆಯ ಪಕ್ಕದಲ್ಲಿ ತಮ್ಮ ಬೈಕ್ ನಿಲ್ಲಿಸಿ ಕಿರಿಯ ಪುತ್ರ ಜಿತೇಂದ್ರನ ಜೊತೆ ಮಾತನಾಡುತ್ತಿದ್ದಾಗ ಗಿಲ್ ಚಲಾಯಿಸುತ್ತಿದ್ದ ರ್ಯಾಲಿ ಕಾರು ಅವರಿಗೆ ಢಿಕ್ಕಿ ಹೊಡೆದಿತ್ತು. ಹಿಂದಿನಿಂದ ಬಂದ ಇತರ ಎರಡು ಕಾರುಗಳೂ ರಸ್ತೆಗೆ ಬಿದ್ದಿದ್ದ ಅವರ ಮೈಮೇಲೆ ಹಾದು ಹೋಗಿದ್ದವು. ಗಿಲ್ ಮತ್ತು ಸಹಚಾಲಕ ಎಂ.ಶರೀಫ್ ವಿರುದ್ಧ ಕೊಲೆಯಲ್ಲದ ನರಹತ್ಯೆ ಆರೋಪವನ್ನು ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಗ್ರಾಮಸ್ಥರು ಮತ್ತು ಮೃತರ ಬಂಧುಗಳು ಪ್ರತಿಭಟನೆಯನ್ನು ನಡೆಸಿ ಪರಿಹಾರ,ಮೃತರ ಪುತ್ರನಿಗೆ ಸರಕಾರಿ ಉದ್ಯೋಗ ಮತ್ತು ಆರೋಪಿಗಳ ಬಂಧನಕ್ಕಾಗಿ ಆಗ್ರಹಿಸಿದ್ದು,ರವಿವಾರ ಮಧ್ಯಾಹ್ನದವರೆಗೂ ಶವಗಳು ಘಟನಾ ಸ್ಥಳದಲ್ಲಿಯೇ ಬಿದ್ದುಕೊಂಡಿದ್ದವು.

ರ್ಯಾಲಿಯ ಸಂಘಟಕರು ಘಟನಾ ಸ್ಥಳಕ್ಕೆ ಬರಬೇಕೆಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ,ಆದರೆ ಅವರು ಸ್ಪಂದಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News