ನಿತ್ಯ ಲಕ್ಷ ತುಳಸಿ ಅರ್ಚನೆಯಿಂದ ಕಾಶ್ಮೀರ ಸಮಸ್ಯೆ ಇತ್ಯರ್ಥವಾಯಿತು: ಪಲಿಮಾರು ಶ್ರೀ

Update: 2019-09-22 15:21 GMT

ಉಡುಪಿ, ಸೆ.22: ಶ್ರೀಕೃಷ್ಣನಿಗೆ ಸದಾ ಲಕ್ಷ್ಮೀಯ ಸನ್ನಿಧಾನ ಇರುವ ತುಳಸಿ ಅರ್ಚನೆಯನ್ನು ನಿತ್ಯ ಮಾಡಿದ ಪರಿಣಾಮ ಭಗವಂತ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥ ಪಡಿಸಿ, ದೇಶಕ್ಕೆ ತಲೆಯನ್ನು ನೀಡಿದ್ದಾನೆ ಎಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪಲಿಮಾರು ಮಠ ಮತ್ತು ಜಿಲ್ಲಾ ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ರಾಜಾಂಗಣದಲ್ಲಿ ರವಿವಾರ ಆಯೋಜಿಸಲಾದ ಕೋಟಿ ತುಳಸೀ ಅರ್ಚನೆ ಕಾರ್ಯಕ್ರಮಲ್ಲಿ ಅವರು ಆಶೀರ್ವಚನ ನೀಡಿದರು.

ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ಭಗವದ್ಗೀತೆ ನೇರ ಭಗವಂತನ ಗೀತೆಯಾಗಿದ್ದರೆ, ವಿಷ್ಣು ಸಹಸ್ರನಾಮ ಭಕ್ತನ ಗೀತೆಯಾಗಿದೆ. ವಿಷ್ಣು ಸಹಸ್ರನಾಮದ ಶಕ್ತಿ ಅಪಾರವಾಗಿದ್ದು, ಇದರ ಒಂದೊಂದು ನಾಮಕ್ಕೂ ನೂರಾರು ಅರ್ಥಗಳಿವೆ. ಇದರ ಪಠಣದಿಂದ ದೇಶ ಹಾಗೂ ಜಗತ್ತಿಗೆ ಕಲ್ಯಾಣವಾಗುತ್ತದೆ ಎಂದು ತಿಳಿಸಿದರು.

ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.

ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ.ಮಂಜುನಾಥ ಉಪಾಧ್ಯ, ಜೊತೆ ಕಾರ್ಯದರ್ಶಿ ನಾಗರಾಜ ಉಪಾಧ್ಯ, ಕೃಷ್ಣ ಮಠದ ಪಿಆರ್‌ಒ ಶ್ರೀಶ ಭಟ್, ಶ್ರೀಗಳ ಕಾರ್ಯದರ್ಶಿ ಗಿರೀಶ್ ಉಪಾಧ್ಯಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News