ಶಾಲೆಯ ರಕ್ಷಣೆ ಸ್ಥಳೀಯರ ಜವಾಬ್ದಾರಿ: ಎ.ಬಿ.ಶೆಟ್ಟಿ

Update: 2019-09-22 15:24 GMT

ಉಡುಪಿ, ಸೆ.22: ಶಿಕ್ಷಕರು ಮಗುವಿನ ಭವಿಷ್ಯವನ್ನು ರೂಪಿಸುವ ಕೆಲಸ ಮಾಡಿದರೆ, ಸ್ಥಳೀಯರು ಶಾಲೆಯನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಕೇವಲ ನಿರ್ವಹಣೆ ಕೊರತೆಯಿಂದ ಶಾಲೆ ಮುಚ್ಚುಗಡೆಯಾಗುವುದು ನಾಚಿಕೆಗೇಡಿನ ಸಂಗತಿ ಎಂದು ಬೆಂಗಳೂರಿನ ಲೋಕ ಅದಾಲತ್ ಖಾಯಂ ಸದಸ್ಯ ಎ.ಬಿ.ಶೆಟ್ಟಿ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ಬುಡ್ನಾರು ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಹಾಗೂ ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಸಮಾರಂಭದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮುಚ್ಚುವ ಭೀತಿಯಲ್ಲಿರುವ ಕನ್ನಡ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಬಹುದಾಗಿದೆ. ಜೀವನದಲ್ಲಿ ಹಣ, ಆಸ್ತಿಗಿಂತ ಶಾಲೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶಂಕರ್ ಶೆಟ್ಟಿ ಉದ್ಘಾಟಿಸಿದರು.ಯುಪಿಎಂಸಿ ಕಾಲೇಜಿನ ಪ್ರಾಂಶುಪಾಲ ಡಾ. ಮಧುಸೂದನ್ ಭಟ್, ಬೆಂಗಳೂರು ಬಿಎಸ್‌ಎನ್‌ಎಲ್ ಉಪ ಪ್ರಧಾನ ವ್ಯವಸ್ಥಾಪಕ ವಿಷ್ಣುಮೂರ್ತಿ ಭಟ್ ಎಚ್., ಹಳೆಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಿ.ಜಯಕರ ಶೆಟಿ್ಟ ಇಂದ್ರಾಳಿ ಮುಖ್ಯ ಅತಿಥಿಗಳಾಗಿದ್ದರು.

ಹಿರಿಯ ಶಿಕ್ಷಕರಾದ ಶಾರದಾ ಟೀಚರ್, ಎ.ಕುಶಲ ಶೆಟ್ಟಿ, ರತ್ನಾವತಿ ಟೀಚರ್, ರಾಮಚಂದ್ರ ಪ್ರಭು, ಸಂಘದ ಅಧ್ಯಕ್ಷ ಅನಿಲ್ ಇಂದ್ರಾಳಿ ಉಪಸ್ಥಿತರಿದ್ದರು. ಕಾಯದರ್ಶಿ ಸುಜಲ ಸತೀಶ್ ಶೆಟ್ಟಿ ಬುಡ್ನಾರು ಸ್ವಾಗತಿಸಿದರು. ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News