‘ಲೀಲಾವತಿ ಪರಿಣಯ’ ಯಕ್ಷಗಾನ ಪ್ರಸಂಗ ಲೋಕಾರ್ಪಣೆ

Update: 2019-09-22 15:29 GMT

ಉಡುಪಿ, ಸೆ.22: ಉಡುಪಿ ಯಕ್ಷಗಾನ ಕಲಾರಂಗ ಮತ್ತು ಬೆಂಗಳೂರು ಅಭಿನವ ಇದರ ವತಿಯಿಂದ ಮಹಾದೇವ ಯಂಕ ಹಳ್ಳೇರ್ ಹೇಳಿದ ಕಥೆಯನ್ನಾಧರಿಸಿ ಪ್ರಸಂಗಕರ್ತ ಹೊಸ್ತೋಟ ಮಂಜುನಾಥ ಭಾಗವತರು ರಚಿಸಿದ ಯಕ್ಷಗಾನ ಪ್ರಸಂಗ ‘ಲೀಲಾವತಿ ಪರಿಣಯ’ವನ್ನು ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ರವಿವಾರ ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ಲೋಕಾರ್ಪಣೆಗೈದರು.

ಕಲೆ ಮತ್ತು ಶಿಕ್ಷಣ ಎರಡು ಕೂಡ ಜೊತೆಯಾಗಿ ಪಡೆದಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಯಕ್ಷಗಾನ ಕ್ಷೇತ್ರಕ್ಕೆ ಮಹಾದೇವ ಯಂಕ ಹಳ್ಳೇರ್ ಹಾಗೂ ಹೊಸ್ತೋಟ ಮಂಜುನಾಥ್ ಭಾಗವತರು ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಪೇಜಾವರ ಸ್ವಾಮೀಜಿ ಹೇಳಿದರು.

ಪ್ರಸಂಗಕರ್ತ ಹೊಸ್ತೋಟ ಮಂಜುನಾಥ ಭಾಗವತ ಮಾತನಾಡಿ, ಮಹಾ ದೇವ ಯಂಕ ಹಳ್ಳೇರ್ ಕೂಲಿ ಕೆಲಸದ ಮಧ್ಯೆ ಅರ್ಧ ದಿನ ಶಾಲೆಯ ಮಕ್ಕಳಿಗೆ ಯಕ್ಷಗಾನ ಕಲಿಸಲು ವಿನಿಯೋಗಿಸುತ್ತಿದ್ದಾರೆ. ಇವರ ಕಲಾಪ್ರೇಮ ಅದ್ಭುತ. ಇವರ ಕ್ರೀಯಾಶೀಲತೆ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.

ವೇದಿಕೆಯಲ್ಲಿ ಕಥನಕಾರ ಮಹಾದೇವ ಯಂಕ ಹಳ್ಳೇರ್, ಹಿರಿಯ ರಂಗ ಕರ್ಮಿ ಉದ್ಯಾವರ ಮಾಧವ ಆಚಾರ್ಯ, ಯಕ್ಷಗಾನ ಕೇಂದ್ರದ ನಿರ್ದೇಶಕ ಪ್ರೊ.ವರೇಶ ಹೀರೆಗಂಗೆ ಉಪಸ್ಥಿತರಿದ್ದರು.

ಬೆಂಗಳೂರು ಅಭಿನವದ ಪ್ರಕಾಶಕ ನ.ರವಿ ಕುಮಾರ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News