ಕಾಶ್ಮೀರದಲ್ಲಿ ತಕ್ಷಣ ಕರ್ಫ್ಯೂ ಅಂತ್ಯಗೊಳಿಸಲು 500ಕ್ಕೂ ಹೆಚ್ಚು ಶಿಕ್ಷಣ ತಜ್ಞರು,ವಿಜ್ಞಾನಿಗಳ ಆಗ್ರಹ

Update: 2019-09-22 17:35 GMT

ಹೊಸದಿಲ್ಲಿ,ಸೆ.22: ಜಮ್ಮು-ಕಾಶ್ಮೀರದಲ್ಲಿಯ ಬಿಕ್ಕಟ್ಟಿನ ಬಗ್ಗೆ ತಮ್ಮ ತೀವ್ರ ಕಳವಳವನ್ನು ವ್ಯಕ್ತಪಡಿಸಿ 500ಕ್ಕೂ ಅಧಿಕ ಶಿಕ್ಷಣ ತಜ್ಞರು ಮತ್ತು ವಿಜ್ಞಾನಿಗಳು ಶನಿವಾರ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದಾರೆ.

ಒಂದೂವರೆ ತಿಂಗಳ ಹಿಂದೆ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡಾಗಿನಿಂದಲೂ ರಾಜ್ಯವು ಕರ್ಫ್ಯೂನ ಕರಿನೆರಳಿನಲ್ಲಿದೆ. ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ,ಉಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಸೇರಿದಂತೆ ಹಲವಾರು ರಾಜಕೀಯ ನಾಯಕರು ಬಂಧನದಲ್ಲಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡಾಗಿನಿಂದ ಸರಕಾರವು ಕಾಶ್ಮೀರದಲ್ಲಿ ಸಂವಹನವನ್ನು ನಿರ್ಬಂಧಿಸಿದೆ. ಪ್ರತಿಪಕ್ಷ ನಾಯಕರು ಮತ್ತು ಭಿನ್ನಮತೀಯರನ್ನು ಬಂಧನದಲ್ಲಿರಿಸಿದೆ. ರಾಜ್ಯವನ್ನು ಭದ್ರತಾ ಸಿಬ್ಬಂದಿಗಳಿಂದ ತುಂಬಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಶಿಕ್ಷಣ ತಜ್ಞರು ಮತ್ತು ವಿಜ್ಞಾನಿಗಳು,ವಿಧಿ 370 ಕುರಿತು ತಾವು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದೇವಾದರೂ ರಾಜ್ಯದಲ್ಲಿ ಸಂವಹನ ವ್ಯವಸ್ಥೆ ಮತ್ತು ಅಂತರ್ಜಾಲವನ್ನು ನಿರ್ಬಂಧಿಸಿರುವುದು ತಮಗೆ ದಿಗಿಲು ಮೂಡಿಸಿದೆ. ಕಾಶ್ಮೀರದ ಕೆಲವು ಭಾಗಗಳಲ್ಲಿ ಸ್ಥಿರ ದೂರವಾಣಿ ಸೇವೆಗಳನ್ನು ಪುನರಾರಂಭಿಸಿರುವ ಬಗ್ಗೆ ಮಾಹಿತಿಯಿದೆ. ಖುದ್ದು ಸರಕಾರದ ಅಂಕಿಅಂಶಗಳಂತೆ ಕಾಶ್ಮೀರದಲ್ಲಿ ಸ್ಥಿರ ದೂರವಾಣಿಗಳ ಟೆಲಿ-ಸಾಂದ್ರತೆ ಶೇ.1ಕ್ಕೂ ಕಡಿಮೆಯಿದೆ. ಹೀಗಾಗಿ ಈ ಕ್ರಮ ಕಾಶ್ಮೀರಿಗಳಿಗೆ ಸಾಕಷ್ಟು ಪರಿಹಾರವನ್ನು ಒದಗಿಸುವಲ್ಲಿ ವಿಫಲಗೊಂಡಿದೆ. ದೇಶದ ಇತರ ಭಾಗಗಳಲ್ಲಿರುವ ಕಾಶ್ಮೀರಿ ವಿದ್ಯಾರ್ಥಿಗಳು ತಮ್ಮ ಕುಟುಂಬಗಳನ್ನು ಸಂಪರ್ಕಿಸಲು ಸಾಧ್ಯವಾಗದೆ ಆತಂಕಗೊಂಡಿದ್ದಾರೆ ಎಂದಿದ್ದಾರೆ.

ರಾಜ್ಯದಲ್ಲಿಯ ನಿರ್ಬಂಧಗಳಿಂದಾಗಿ ಜನರಿಗೆ ಔಷಧಿಗಳನ್ನು ಖರೀದಿಸಲು,ಮಕ್ಕಳಿಗೆ ಶಾಲಾಕಾಲೇಜುಗಳಿಗೆ ಹೋಗಲೂ ಸಾಧ್ಯವಾಗುತ್ತಿಲ್ಲ ಎಂದು ಬೆಟ್ಟು ಮಾಡಿರುವ ಹೇಳಿಕೆಯು,ಅಲ್ಲಿ ಹೇರಲಾಗಿರುವ ಕರ್ಫ್ಯೂವನ್ನು ತಕ್ಷಣ ಅಂತ್ಯಗೊಳಿಸುವಂತೆ ಸರಕಾರವನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News