‘ಹಾಲಿವುಡ್ ಸಿನೆಮಾ, ಜಿಮ್’: ಗೃಹಬಂಧನದಲ್ಲಿರುವ ಕಾಶ್ಮೀರಿ ನಾಯಕರ ಬೇಡಿಕೆ ಈಡೇರಿಸಿದ್ದೇವೆ ಎಂದ ಕೇಂದ್ರ ಸಚಿವ

Update: 2019-09-22 16:29 GMT

ಹೊಸದಿಲ್ಲಿ,ಸೆ.22: ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಗೃಹ ಬಂಧನದಲ್ಲಿಡಲಾಗಿರುವ ವಿಪಕ್ಷ ನಾಯಕರು ಸರಕಾರ ಗೃಹ ಅತಿಥಿಗಳಾಗಿದ್ದು, ಬೆಳಗಿನ ಉಪಹಾರಕ್ಕೆ ಬ್ರೌನ್ ಬ್ರೆಡ್ ಸೇರಿದಂತೆ ಮನರಂಜನೆಗೆ ಹಾಲಿವುಡ್ ಸಿನೆಮಾಗಳು ಮತ್ತು ಜಿಮ್ ವ್ಯವಸ್ಥೆ ಹೀಗೆ ಅವರ ಬೇಡಿಕೆಯ ಎಲ್ಲ ವಸ್ತುಗಳನ್ನೂ ಪೂರೈಸಲಾಗುತ್ತಿದೆ ಎಂದು ಪ್ರಧಾನಿ ಕಚೇರಿಯ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ರವಿವಾರ ತಿಳಿಸಿದ್ದಾರೆ.

ಗೃಹ ಸಚಿವ ಅಮಿತ್ ಶಾ ಮಾಡಿರುವುದು ಗೃಹ ಬಂಧನವಲ್ಲ. ಅವರೆಲ್ಲ ಪಂಚತಾರಾ ಅಥಿತಿಗೃಹಗಳಲ್ಲಿ ಜೀವಿಸುತ್ತಿದ್ದಾರೆ ಮತ್ತು ಶ್ರೀನಗರಕ್ಕೆ ತೆರಳಿದ ಸಂದರ್ಭದಲ್ಲಿ ನನಗೂ ಅಂತಹ ಅತ್ಯುತ್ತಮ ಸ್ಥಳ ದೊರಕದು ಎಂದು ಸಚಿವರು ತಿಳಿಸಿದ್ದಾರೆ.

ಬಂಧಿತರನ್ನು ಹದಿನೆಂಟು ತಿಂಗಳ ಒಳಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ ಸಿಂಗ್, “ನಾವು ಅವರನ್ನೆಲ್ಲ, ಶೇಕ್ ಮುಹಮ್ಮದ್ ಅಬ್ದುಲ್ಲಾ ಸರಕಾರ ಶ್ಯಾಮ ಪ್ರಸಾದ್ ಮುಖರ್ಜಿಯವರನ್ನು ಗೃಹ ಬಂಧನದಲ್ಲಿರಿಸಿದಂತೆ ಇರಿಸಿಲ್ಲ. 44 ದಿನಗಳ ಕಾಲ ಯಾವುದೇ ವೈದ್ಯಕೀಯ ಸೌಲಭ್ಯವನ್ನೂ ನೀಡದೆ ರಡು ಕೋಣೆಗಳ ಮನೆಯಲ್ಲಿ ಅವರನ್ನು ಕೂಡಿಹಾಕಲಾಗಿದ್ದ ಸಂದರ್ಭದಲ್ಲಿ ಮುಖರ್ಜಿ ಕೊನೆಯುಸಿರೆಳೆದಿದ್ದರು. ಅವರು ಮುಂಜಾನೆ 2.30ರ ವೇಳೆಗೆ ಮೃತಪಟ್ಟಿದ್ದರೂ ಮಧ್ಯಾಹ್ನ ಒಂದು ಗಂಟೆಗಷ್ಟೇ ಈ ಸುದ್ದಿಯನ್ನು ಸಾರ್ವಜನಿಕಗೊಳಿಸಲಾಗಿತ್ತು” ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News