ಗಗನಕ್ಕೇರಿದ ಈರುಳ್ಳಿ ಬೆಲೆ: ಸಂಗ್ರಹ ಮಿತಿ ಹೇರಲು ಕೇಂದ್ರ ಚಿಂತನೆ

Update: 2019-09-22 16:33 GMT

ಹೊಸದಿಲ್ಲಿ,ಸೆ.22: ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ವ್ಯಾಪರಿಗಳಿಗೆ ಈರುಳ್ಳಿ ಸಂಗ್ರಹದ ಮೇಲೆ ಮಿತಿ ಹೇರಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.

ಈರುಳ್ಳಿ ಬೆಳೆಯುವ ರಾಜ್ಯಗಳಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದ್ದು ದಿಲ್ಲಿಯಲ್ಲಿ ಪ್ರತಿ ಕೆ.ಜಿಗೆ 70ರಿಂದ 80ರೂ. ಗೆ ತಲುಪಿದ್ದರೆ ದೇಶದ ಇತರ ಭಾಗಗಳಲ್ಲೂ ತೀವ್ರ ಏರಿಕೆ ಕಂಡಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶದ ಪ್ರಕಾರ, ಈರುಳ್ಳಿ ಚಿಲ್ಲರೆ ಮಾರಾಟ ದರ ದಿಲ್ಲಿಯಲ್ಲಿ 57ರೂ./ಕೆಜಿ, ಮುಂಬೈ, 56ರೂ./ಕೆಜಿ, ಕೋಲ್ಕತಾ 48ರೂ./ಕೆಜಿ ಮತ್ತು ಚೆನ್ನೈಯಲ್ಲಿ 34ರೂ./ಕೆಜಿ ತಲುಪಿದೆ. ಈರುಳ್ಳಿಯ ದೇಶೀಯ ಪೂರೈಕೆಯನ್ನು ಸುಧಾರಿಸಲು ಮತ್ತು ಬೆಲೆ ಹೆಚ್ಚಳವನ್ನು ತಡೆಯಲು ಕಳೆದ ಕೆಲವು ವಾರಗಳಿಂದ ಸರಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಆದರೆ ಕಳೆದ 2-3 ದಿನಗಳಲ್ಲಿ ಚಿಲ್ಲರೆ ಮಾರಾಟ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಕಳೆದ ವರ್ಷ ಬೆಳೆದ ಈರುಳ್ಳಿಯ ಸಾಕಷ್ಟು ಸಂಗ್ರಹ ಇದ್ದು ಪೂರೈಕೆಗೆ ಸಾಕಾಗಿದೆ. ಆದರೆ ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಸಾಗಾಟ ಬಹಳ ಕಷ್ಟಕರವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News