ಎಸ್ ಡಿಪಿಐ ಕುರಿತು ಅವಹೇಳನಕಾರಿ ಸುದ್ದಿ ಬಿತ್ತರಿಸಿದ ಆರೋಪ: ಖಾಸಗಿ ನ್ಯೂಸ್ ಚಾನೆಲ್ ಸಂಪಾದಕರ ವಿರುದ್ಧ ದೂರು

Update: 2019-09-22 17:24 GMT

ಪುತ್ತೂರು, ಸೆ.22: ಎಸ್ ಡಿಪಿಐ ಪಕ್ಷದ ಕುರಿತು ಅವಹೇಳನಕಾರಿಯಾಗಿ ಸುದ್ದಿ ಬಿತ್ತರಿಸಿದ್ದಾರೆಂದು ಆರೋಪಿಸಿ ಪುತ್ತೂರಿನ ಖಾಸಗಿ ನ್ಯೂಸ್ ಚಾನೆಲ್ ವಿರುದ್ಧ ಎಸ್ ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಜೊತೆ ಕಾರ್ಯದರ್ಶಿ ಅಶ್ರಫ್ ಬಾವ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

“ಕೇಂದ್ರ ಸರ್ಕಾರವು ಇತ್ತೀಚೆಗೆ ವಾಹನ ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಹೆಚ್ಚಿಸಿದ್ದರ ವಿರುದ್ಧ ಎಸ್ ಡಿಪಿಐ ಪುತ್ತೂರು ಪೇಟೆಯಲ್ಲಿ ಪ್ರತಿಭಟನೆಯನ್ನು ನಡೆಸಿತ್ತು. ಈ ಸಂದರ್ಭ ನಮ್ಮ ಪಕ್ಷದ ನಾಯಕ ಜಾಬಿರ್ ಅರಿಯಡ್ಕ ಸೈನಿಕರನ್ನು ಅವಮಾನಿಸಿದ್ದಾರೆಂದು ಹಿಂದೂ ಜಾಗರಣ ವೇದಿಕೆಯವರು ಮತ್ತು ಬಜರಂಗದಳದವರು ಪುತ್ತೂರು ನಗರಠಾಣೆಗೆ ಸುಳ್ಳು ದೂರನ್ನು ನೀಡಿದ್ದಾರೆ. ಇದರ ಜೊತೆಗೆ ‘ಕಹಳೆ ನ್ಯೂಸ್' ಗೊಂದಲಮಯ ಹೇಳಿಕೆಗಳ ಮೂಲಕ ಎಸ್‍ ಡಿಪಿಐಯವರು ದೇಶದ್ರೋಹಿಗಳೆಂದು ಸಂಭೋದಿಸಿದೆ. ಇಷ್ಟೇ ಅಲ್ಲದೆ ಎಸ್ ಡಿಪಿಐ ಪಕ್ಷದವರನ್ನು ತನ್ನ ಸ್ಟುಡಿಯೋಗೆ ಕರೆಯುವುದಿಲ್ಲ ಎಂದು ಹೇಳಿಕೊಂಡಿರುವ ಚಾನೆಲ್ ನ ಸಂಪಾದಕ ಶ್ಯಾಮ್ ಸುದರ್ಶನ್ ಹಿಂದೂ-ಮುಸ್ಲಿಮರ ನಡುವೆ ಕೋಮುಗಲಭೆ ನಡೆಯಬೇಕೆಂಬ ದುರುದ್ದೇಶದಿಂದ ಮಾತನಾಡುವ ಮೂಲಕ ಮಾಧ್ಯಮವನ್ನು ದುರುಪಯೋಗಪಡಿಸಿ ಪತ್ರಿಕಾ ಧರ್ಮಕ್ಕೆ ಚ್ಯುತಿ ತಂದಿದ್ದಾರೆ. ಅವರು ನಡೆಸಿರುವ ಚರ್ಚೆಯಿಂದಾಗಿ ಸಾರ್ವಜನಿಕರು ನನ್ನಲ್ಲೇ ಸಂಶಯಾಸ್ಪದವಾಗಿ ಈ ಬಗ್ಗೆ ಮಾತನಾಡಿರುತ್ತಾರೆ. ಇದರಿಂದಾಗಿ ನನಗೂ ನಾನೂ ಪ್ರತಿನಿಧಿಸಿರುವ ಪಕ್ಷಕ್ಕೂ ಮಾನಹಾನಿಯಾಗಿದೆ. ನಮ್ಮ ಪಕ್ಷದ ಪ್ರತಿಭಟನೆಯನ್ನು ಚಾನೆಲ್ ನ್ಯೂಸ್ ಸಂಪಾದಕ ಶ್ಯಾಮ್ ಸುದರ್ಶನ್ ‘ದೇಶದ್ರೋಹದ ಭಾಷಣ’ ಎಂದು ತಪ್ಪು ರೂಪ ಕೊಟ್ಟಿದ್ದಾರೆ. ಎಸ್ ಡಿಪಿಐ ಪಕ್ಷವು ದೇಶದ್ರೋಹಿ ಪಕ್ಷವೆಂದು ಹೇಳಿ ಹಿಂದೂ-ಮುಸ್ಲಿಮರ ನಡುವೆ ವೈಷಮ್ಯವನ್ನು ಹುಟ್ಟು ಹಾಕಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಕೆಲಸವನ್ನು ಕೂಡ 'ಕಹಳೆ ನ್ಯೂಸ್' ಸಂಪಾದಕರು ಮಾಡಿದ್ದಾರೆ. ಈ ರೀತಿ ನಮ್ಮ ಪಕ್ಷವನ್ನು ಸಾರ್ವಜನಿಕವಾಗಿ ಮಾನಹಾನಿ ಮಾಡಿದ ಶ್ಯಾಮ್ ಸುದರ್ಶನ್ ವಿರುದ್ದ ಕೋಮು ಪ್ರಚೋದನೆಗೆ ಕುಮ್ಮಕ್ಕು ಮತ್ತು ನಮ್ಮ ಪಕ್ಷವನ್ನು ಮಾನಹಾನಿ ಮಾಡಿದ ಮೊಕದ್ದಮೆಯ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅಶ್ರಫ್ ಬಾವ ದೂರಿನಲ್ಲಿ ತಿಳಿಸಿದ್ದಾರೆ.

ಪುತ್ತೂರು ನಗರ ಪೊಲೀಸರು ದೂರು ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News