ಸೌದಿ ಯುವರಾಜನ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ಪ್ರಯಾಣಿಸಿದ ಇಮ್ರಾನ್

Update: 2019-09-22 18:05 GMT

ಇಸ್ಲಾಮಾಬಾದ್,ಸೆ.22: ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶನಿವಾರ ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ಆಗಮಿಸಿದರು.

   ಸೌದಿ ಅರೇಬಿಯಕ್ಕೆ ಭೇಟಿ ನೀಡಿದ ಬಳಿಕ ಇಮ್ರಾನ್ ಖಾನ್ ಅಲ್ಲಿಂದ ಸಾಮಾನ್ಯ ವಾಣಿಜ್ಯ ಪ್ರಯಾಣಿಕ ವಿಮಾನದಲ್ಲಿ ಅಮೆರಿಕಕ್ಕೆ ಪ್ರಯಾಣಿಸುವವರಿದ್ದರು. ಆದರೆ ಸೌದಿ ಯುವರಾಜ ಅದಕ್ಕೆ ಅವಕಾಶ ನೀಡಲಿಲ್ಲ. ‘‘ನೀವು ನಮ್ಮ ವಿಶೇಷ ಅತಿಥಿಯಾಗಿರುವಿರಿ ಹಾಗೂ ನೀವು ನನ್ನ ವಿಶೇಷ ವಿಮಾನದಲ್ಲಿ ಅಮೆರಿಕಕ್ಕೆ ತೆರಳಲಿದ್ದೀರಿ’’ ಎಂದವರು ಹೇಳಿರುವುದಾಗಿ ಪಾಕ್ ಮೂಲದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಈ ಮಧ್ಯೆ ಪಾಕ್‌ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ ಅವರು ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ, ‘‘ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ತಲುಪಿದ್ದಾರೆ. ಅವರ ಏಳು ದಿನಗಳ ಈ ಭೇಟಿಯು, ಕಾಶ್ಮೀರದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ವಿಶ್ವದ ಗಮನವನ್ನು ಸೆಳೆಯುವುದಾಗಿದೆ’’ ಎಂದವರು ಹೇಳಿದರು.

ಅಮೆರಿಕಕ್ಕೆ ಆಗಮಿಸುವ ಮುನ್ನ ಖಾನ್ ಅವರು, ಕಾಶ್ಮೀರ ವಿಷಯವಾಗಿ ಪಾಕಿಸ್ತಾನದ ನಿಲುವಿಗೆ ಬೆಂಬಲವನ್ನು ಪಡೆಯುವುದಕ್ಕಾಗಿ ಸೌದಿ ಆರೇಬಿಯಕ್ಕೆ ಎರಡು ದಿನಗಳ ಭೇಟಿ ನೀಡಿದ್ದರು. ಸೌದಿ ಆರೇಬಿಯದಲ್ಲಿ ಇಮ್ರಾನ್ ಅವರು ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲಝೀಜ್ ಅವರನ್ನು ಭೇಟಿಯಾಗಿ ಕಾಶ್ಮೀರ ವಿಷಯವಲ್ಲದೆ, ಉಭಯ ದೇಶಗಳ ನಡುವೆ ವಾಣಿಜ್ಯ, ಹೂಡಿಕೆ ಹಾಗೂ ಆರ್ಥಿಕ ಬಾಂಧವ್ಯಗಳ ಕುರಿತಾಗಿಯೂ ಚರ್ಚಿಸಿದ್ದರು. ಸೌದಿಯಿಂದ ಖಾನ್ ಅವರು ನ್ಯೂಯಾಕ್‌ಗೆ ನಿರ್ಗಮಿಸಿದ್ದರು. ಅಲ್ಲಿ ಅವರು ವಿಶ್ವಸಂಸ್ಥೆಯ ಸಾಮಾನ್ಯಸಭೆಯ 74ನೇ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್ 27ರಂದು ಅವರ ವಿಶ್ವಸಂಸ್ಥೆಯ ಸಾಮಾನ್ಯಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News