ಮೋದಿ ಎದುರೇ ಗಾಂಧಿ, ನೆಹರೂರ ಜಾತ್ಯಾತೀತ ದೂರದೃಷ್ಟಿಯನ್ನು ಹೊಗಳಿದ ಅಮೆರಿಕಾದ ಹಿರಿಯ ಸೆನೆಟರ್

Update: 2019-09-23 11:52 GMT

ಹ್ಯೂಸ್ಟನ್, ಸೆ.23: ರವಿವಾರ ಟೆಕ್ಸಾಸ್ ನ ಹ್ಯೂಸ್ಟನ್ ನಗರದ ಎನ್‍ಆರ್ ಜಿ ಸ್ಟೇಡಿಯಂನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ 50,000ದಷ್ಟು ಜನರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು ಇಡೀ ಜಗತ್ತಿನ ಗಮನ ಸೆಳೆದಿದೆ. ಆದರೆ ಈ ಸಂದರ್ಭ ಪ್ರಧಾನಿಯನ್ನು ಸಭೆಗೆ ಪರಿಚಯಿಸಿ ಅಮೆರಿಕಾದ ಹಿರಿಯ ಸಂಸದ ಹಾಗೂ ಸೆನೇಟಿನ  ನಾಯಕ ಸ್ಟೇನಿ ಹೋಯೆರ್ ಆಡಿದ ಭಾಷಣದಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಉಲ್ಲೇಖಿಸಿದ್ದು ಕೂಡ ಅಷ್ಟೇ ಸ್ಮರಣಾರ್ಹ.

“ಪ್ರತಿಯೊಬ್ಬ ವ್ಯಕ್ತಿಯ ಮಾನವ ಹಕ್ಕುಗಳ ರಕ್ಷಣೆ ಹಾಗೂ ವೈವಿಧ್ಯತೆಗೆ ಗೌರವ ನೀಡುವ ಜಾತ್ಯತೀತ ಪ್ರಜಾಪ್ರಭುತ್ವ ಭಾರತವಾಗಬೇಕೆಂಬ ಗಾಂಧೀಜಿಯ ಸಿದ್ಧಾಂತ ಹಾಗೂ ಭಾರತದ ಕುರಿತಂತೆ ನೆಹರೂ ಅವರಿಗಿದ್ದ ದೂರದೃಷ್ಟಿಯ ರೀತಿಯಲ್ಲಿ ನಡೆಯುತ್ತಿರುವ ಭಾರತದಂತೆ ಅಮೆರಿಕಾ ತನ್ನ ಪ್ರಾಚೀನ ಸಂಸ್ಕೃತಿ ಹಾಗೂ ಪದ್ಧತಿಗಳ ಬಗ್ಗೆ ಹೆಮ್ಮೆ ಹೊಂದಿದೆ'' ಎಂದು ಹೋಯೆರ್ ಹೇಳಿದರು.

ಬಲಾಢ್ಯರಿಗೆ ದೊರಕುವಷ್ಟೇ ಅವಕಾಶವನ್ನು ದುರ್ಬಲರಿಗೂ ಪ್ರಜಾಪ್ರಭುತ್ವ ನೀಡುತ್ತದೆ ಎಂಬ ಗಾಂಧೀಜಿಯ ಮಾತುಗಳನ್ನೂ  ಡೆಮಾಕ್ರೆಟಿಕ್ ಪಕ್ಷದ ಹಿರಿಯ ನಾಯಕರಾದ ಹೋಯೆರ್ ಉಲ್ಲೇಖಿಸಿದರು.

ಜವಾಹರಲಾಲ್ ನೆಹರೂ ಅವರನ್ನು ಭಾರತದ ಆಡಳಿತ ಬಿಜೆಪಿ ಪಕ್ಷದವರು ಆಗಾಗ ಟೀಕಿಸುತ್ತಲೇ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು. ಪ್ರಧಾನಿಯ ಹ್ಯೂಸ್ಟನ್ ಕಾರ್ಯಕ್ರಮಕ್ಕಿಂತ ಕೆಲವೇ ಗಂಟೆಗಳ ಮೊದಲು  ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ  ಅಮಿತ್ ಶಾ ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪಾಕ್ ಆಕ್ರಮಿತ ಕಾಶ್ಮೀರಕ್ಕೆ  ನೆಹರೂ ಕಾರಣ ಎಂದು ದೂರಿದ್ದರು.

“1947ರಲ್ಲಿ ನೆಹರೂ ಅವರು ಘೋಷಿಸಿದ ಅಕಾಲಿಕ ಕದನ ವಿರಾಮವೇ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ಕಾರಣವಾಯಿತಲ್ಲದೆ ಮುಂದೆ ಕಣಿವೆಯಲ್ಲಿ ಉಗ್ರವಾದಕ್ಕೂ ನಾಂದಿಯಾಯಿತು” ಎಂದು ಶಾ ಹೇಳಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News