ಎಲ್ಲ ಕೆಲಸಗಳಿಗೂ ಒಂದೇ ಕಾರ್ಡ್:ಗೃಹಸಚಿವ ಅಮಿತ್ ಶಾ ಪ್ರಸ್ತಾವ

Update: 2019-09-23 14:04 GMT

 ಹೊಸದಿಲ್ಲಿ,ಸೆ.23: ಆಧಾರ್,ಪಾಸ್‌ಪೋರ್ಟ್,ವಾಹನ ಚಾಲನೆ ಪರವಾನಿಗೆ ಮತ್ತು ಬ್ಯಾಂಕ್ ಖಾತೆಗಳಂತಹ ಎಲ್ಲ ಉದ್ದೇಶಗಳಿಗಾಗಿ ಒಂದೇ ಗುರುತಿನ ಚೀಟಿಯನ್ನು ಹೊಂದುವ ಪರಿಕಲ್ಪನೆಯನ್ನು ಗೃಹಸಚಿವ ಅಮಿತ್ ಶಾ ಅವರು ಸೋಮವಾರ ಇಲ್ಲಿ ಪ್ರಸ್ತಾಪಿಸಿದರು.

ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಕಚೇರಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಈ ಪರಿಕಲ್ಪನೆಗೆ ಒತ್ತು ನೀಡಿದರು. 2021ರಲ್ಲಿ ನಡೆಯಲಿರುವ ಜನಗಣತಿಗೆ 12,000 ಕೋ.ರೂ.ವೆಚ್ಚವಾಗಲಿದ್ದು,ಇದು ಈವರೆಗಿನ ಅತ್ಯಂತ ಹೆಚ್ಚಿನ ವೆಚ್ಚವಾಗಿದೆ ಎಂದು ತಿಳಿಸಿದ ಅವರು,ಜನಗಣತಿಯು ದೇಶದಲ್ಲಿಯ ಕೊನೆಯ ವ್ಯಕ್ತಿಗೂ ಅಭಿವೃದ್ಧಿಯ ಫಲವನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಈ ಪ್ರಕ್ರಿಯೆಯು ಕಡಿಮೆ ಲಿಂಗಾನುಪಾತವಿರುವ ರಾಜ್ಯಗಳಲ್ಲಿ ಹೆಣ್ಣುಮಗುವಿನ ಕುರಿತು ಅರಿವನ್ನು ಹೆಚ್ಚಿಸಲು ಯೋಜನೆಗಳನ್ನು ರೂಪಿಸುವಲ್ಲಿ ಸರಕಾರಕ್ಕೆ ನೆರವಾಗಿದೆ. ಮುಂಬರುವ ಜನಗಣತಿಯನ್ನು ಮೊಬೈಲ್ ಆ್ಯಪ್ ಬಳಸಿ ನಡೆಸಲಾಗುವುದು ಮತ್ತು ಡಿಜಿಟಲ್ ದತ್ತಾಂಶಗಳನ್ನು ವಿವಿಧ ವಿಶ್ಲೇಷಣೆಗಳಿಗೆ ಬಳಸಬಹುದಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News