ಉಡುಪಿ: ಕೂಡಲೇ ಮರಳುಗಾರಿಕೆ ಪ್ರಾರಂಭಿಸಲು ಕಟ್ಟಡ ಕಾರ್ಮಿಕರ ಧರಣಿ

Update: 2019-09-23 14:27 GMT

ಉಡುಪಿ, ಸೆ.23: ಕಳೆದ ಸುಮಾರು ಎರಡು ವರ್ಷಗಳಿಂದ ನಿಂತಿರುವ ಮರಳುಗಾರಿಕೆಯನ್ನು ಕೂಡಲೇ ಪುನರಾರಂಭಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ತಮ್ಮ ಅನಿರ್ದಿಷ್ಠಾವದಿ ಧರಣಿ ಸತ್ಯಾಗ್ರಹವನ್ನು ಇಂದು ಪ್ರಾರಂಭಿಸಿದ್ದಾರೆ.

ಮರಳುಗಾರಿಕೆ ಪ್ರಾರಂಭಗೊಂಡು ಕಾರ್ಮಿಕರು ಮರಳು ತೆಗೆಯಲು ನದಿಗೆ ಇಳಿಯುವವರೆಗೆ ತಮ್ಮೀ ಧರಣಿ ಮುಂದುವರಿಯಲಿದೆ ಎಂದು ಸಂಘಟನೆಗಳ ಪ್ರಮುಖರು ತಿಳಿಸಿದರು.

ಧರಣಿಯನ್ನು ಉದ್ಘಾಟಿಸಿದ ಸಿಡಬ್ಲುಎಫ್‌ಐನ ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಮರಳುಗಾರಿಕೆ ಸೆ.20ರಂದು ಆರಂಭವಾಗುತ್ತದೆ ಎಂಬ ಶಾಸಕರ ಹೇಳಿಕೆ ಹುಸಿಯಾಗಿದೆ. ಜಿಲ್ಲೆಯ ಕಟ್ಟಡ ಕಾರ್ಮಿಕರು ಉದ್ಯೋಗವಿಲ್ಲದೇ ಸಾಕಷ್ಟು ಕಷ್ಟ-ನಷ್ಟಕ್ಕೆ ಒಳಗಾಗಿದ್ದಾರೆ. ಆದುದರಿಂದ ಜನಪ್ರತಿನಿಧಿಗಳು ತಮ್ಮ ಸರಕಾರದ ಮೂಲಕ ಶೀಘ್ರವಾಗಿ ಮರಳು ಸಮಸ್ಯೆಯನ್ನು ಬಗೆಹರಿಸಬೇಕು. ಮರಳು ತೆಗೆಯಲು ನದಿಗಿಳಿಯುವ ತನಕ ಧರಣಿಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದರು.

ಎರಡು ವರ್ಷಗಳಿಂದ ಕಂಡುಬಂದಿರುವ ಮರಳಿನ ಸಮಸ್ಯೆಯಿಂದ ವಿವಿಧ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೇ ಜೀವನ ಸಾಗಿಸಲು ಒದ್ದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳು ಸಿಗಬೇಕಿದ್ದರೆ ಅವರು 90 ದಿನ ಕೆಲಸ ಮಾಡಬೇಕು. ಹೀಗಾಗಿ ಕಟ್ಟಡ ಕಾರ್ಮಿಕರು 90 ದಿನಗಳ ಕೆಲಸ ಮಾಡಲು ಅಲೆದಾಡಿ ಯಾರ್ಯಾರನ್ನೊ ಕಾಡಿಬೇಡಬೇಕಾಗಿದೆ ಎಂದರು.

ಶಾಶ್ವತ ಪರಿಹಾರ ಬೇಕು: ಶೀಘ್ರವೇ ಮರಳುಗಾರಿಕೆ ಪ್ರಾರಂಭಗೊಳ್ಳುವುದು ಮಾತ್ರವಲ್ಲದೇ, ಮರಳು ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳ ಬೇಕೆಂದು ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಅಲ್ಲದೇ ಮರಳು ಸಮಸ್ಯೆಗೆ ಒಳಗಾಗಿ ಕೆಲಸ ಕಳೆದುಕೊಂಡಿರುವ ಕಟ್ಟಡ ಕಾರ್ಮಿಕರಿಗೆ ಸರಕಾರ ದಿಂದ ಕೂಡಲೇ ಪರಿಹಾರವನ್ನೂ ನೀಡಬೇಕು ಎಂದವರು ಆಗ್ರಹಿಸಿದರು.

ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಈಗಿರುವ ಬಿಜೆಪಿ ಸರಕಾರ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಕೇಂದ್ರ-ರಾಜ್ಯಗಳಲ್ಲಿ ಮಾತ್ರವಲ್ಲದೇ, ಜಿಪಂ, ತಾಪಂಗಳಲ್ಲಿ ಬಿಜೆಪಿಯ ಆಡಳಿತವಿದೆ. ಎಲ್ಲಾ ಶಾಸಕರು ಮತ್ತು ಸಂಸದರು ಸಹ ಬಿಜೆಪಿಯವರೇ ಇದ್ದಾರೆ. ಆದರೆ ನಮ್ಮ ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ, ಜನರ ಕಾಳಜಿ ಕಡಿಮೆ ಇದೆ ಎಂದವರು ದೂರಿದರು.

ಜಿಲ್ಲೆಯಲ್ಲಿ ಮರಳುಗಾರಿಕೆ ಪ್ರಾರಂಭಗೊಂಡರೆ, ಜನರಿಗೆ ಕೆಲಸ ಸಿಗುವುದು ಮಾತ್ರವಲ್ಲದೇ, ಜಿಲ್ಲೆಯ ಆರ್ಥಿಕ ಪ್ರಗತಿಯೂ ಸಾಧ್ಯವಾಗಲಿದೆ. ಮರಳಿನ ಕೊರತೆಯಿಂದಾಗಿ ಜಿಲ್ಲೆಯ ಆರ್ಥಿಕ ಕುಸಿತ ಉಂಟಾಗಿದೆ. ಜಿಲ್ಲೆಯ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವ ಮೂಲ ಉದ್ದೇಶ ಈ ಧರಣಿಗಿದೆ ಎಂದು ಬಾಲಕೃಷ್ಣ ಶೆಟ್ಟಿ ನುಡಿದರು.

ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್)ದಲ್ಲಿ ಮರಳುಗಾರಿಕೆಗೆ ಹಲವು ನಿರ್ಬಂಧಗಳಿವೆ. ಪರಿಸರ ಸೂಕ್ಷ್ಮ ಪ್ರದೇಶ ಎಂಬ ಕಾರಣಕ್ಕಾಗಿ ಕುಂದಾಪುರ ಮತ್ತು ಬೈಂದೂರು ತಾಲೂಕುಗಳಲ್ಲಿ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದ ಅಲ್ಲಿನ ಬಡ ಜನರಿಗೆ ಅತೀವ ತೊಂದರೆಯಾಗಿದೆ. ಅದು ಪರಿಸರ ಸೂಕ್ಷ್ಮ ಪ್ರದೇಶವಾದರೆ, ಅಲ್ಲಿನ ನದಿ ಸಿಹಿ ನೀರಿನ ಪ್ರದೇಶದಲ್ಲಾದರೂ ಅವರಿಗೆ ಮರಳುಗಾರಿಕೆಗೆ ಅವಕಾಶ ಮಾಡಿಕೊಡ ಬೇಕು ಎಂದವರು ಒತ್ತಾಯಿಸಿದರು.

ಮರಳಿನ ಸಮಸ್ಯೆ ಬಗೆಹರಿದರೆ, ಅದರೊಂದಿಗೆ ಜಿಲ್ಲೆಯ ಹತ್ತು ಹಲವು ಸಮಸ್ಯೆಗಳು ಬಗೆಹರಿಯಲಿವೆ ಎಂದು ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದವರು ವಿವರಿಸಿದರು.

ಈ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿಯ ಸಂಚಾಲಕರಾದ ಸುರೇಶ್ ಕಲ್ಲಾಗರ ಹಾಗೂ ಶೇಖರ ಬಂಗೇರ ಅಲ್ಲದೇ ಕಾರ್ಮಿಕ ಮುಖಂಡರಾದ ವೆಂಕಟೇಶ್ ಕೋಣಿ, ಎಚ್.ನರಸಿಂಹ, ದಾಸಭಂಡಾರಿ, ವಿಠಲ ಪೂಜಾರಿ, ರಾಜೀವ್ ಪಡುಕೋಣೆ, ದಯಾನಂದ ಕೋಟ್ಯಾನ್, ಜಗದೀಶ್ ಆಚಾರ್, ನಾಗರತ್ನ, ಶಾರದಾ, ಸುಭಾಷ್ ನಾಯಕ್, ಗಣೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

ಧರಣಿಯು ಮಂಗಳವಾರವೂ ಮುಂದುವರಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News