ಪರಿಸರ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊಡುಗೆ ಅಪಾರ: ಶಾಸಕ ರಘುಪತಿ ಭಟ್

Update: 2019-09-23 14:31 GMT

ಉಡುಪಿ, ಸೆ.23: ಪರಿಸರ ಸ್ವಚ್ಛತೆಯ ಜೊತೆಗೆ ಜನರ ಮನೋಭಾವವನ್ನು ಬದಲಾಯಿಸುವುದು ಸ್ವಚ್ಛ ಭಾರತದ ಪರಿಕಲ್ಪನೆಯಾಗಿದ್ದು, ಸ್ವಚ್ಛತೆಯ ಕುರಿತು ಕಾನೂನು ಜಾರಿಗೆ ಬಂದರೆ ಸಾಲದು, ಜನರ ಮನಸ್ಥಿತಿ ಪರಿವರ್ತನೆಯಾಗಬೇಕು. ನಗರದ ಪರಿಸರವನ್ನು ಸ್ವಚ್ಛವಾಗಿರಿಸುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರವಾದುದು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಸೋಮವಾರ ಅಜ್ಜರಕಾಡಿನ ಪುರಭವನದ ಮಿನಿ ಸಭಾಂಗಣದಲ್ಲಿ ನಡೆದ ಪೌರ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕ ಸ್ಥಳದ ಸ್ವಚ್ಚತೆಗಾಗಿ ಬಿಡುವಿಲ್ಲದೆ ನಿರಂತರ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಸೇವೆ ಹಾಗೂ ಅವರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವ ಸಲುವಾಗಿ ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಉಡುಪಿ ನಗರಕ್ಕೆ ಸ್ವಚ್ಛತೆಯಲ್ಲಿ ಹಲವಾರು ಪ್ರಶಸ್ತಿಗಳು ಬಂದಿರುವಲ್ಲಿ ಪೌರಾಡಳಿತ ಹಾಗೂ ಪೌರಕಾರ್ಮಿಕರ ಕೊಡುಗೆ ಅಪಾರ ಎಂದು ಭಟ್ ಹೇಳಿದರು.

ಸದ್ಯ 700 ಮಂದಿಗೆ ಓರ್ವ ಪೌರ ಕಾರ್ಮಿಕ ಎಂಬ ಪರಿಕಲ್ಪನೆ ಇದ್ದು, ಸ್ಥಳೀಯ ನಾಗರಿಕರ ಜೊತೆಗೆ ಪ್ರವಾಸಿಗರಿಂದ ತುಂಬಿ ತುಳುಕುವ ಉಡುಪಿಯಂತಹ ನಗರದಲ್ಲಿ ಜನಸಂಖ್ಯಾ ಆಧಾರದಲ್ಲಿ ಪೌರಕಾರ್ಮಿಕರ ನೇಮಕಾತಿ ಮಾಡಿರುವುದು ಅವೈಜ್ಞಾನಿಕ. ನಿವೃತ್ತಿ, ಅಕಾಲಿಕ ಮರಣ ಮುಂತಾದ ಕಾರಣ ಗಳಿಂದ ಪೌರ ಕಾರ್ಮಿಕರ ಕೊರತೆ ಸಮಸ್ಯೆ ಉಂಟಾಗಿದೆ. ಪೌರ ಕಾರ್ಮಿಕರ ನೇಮಕಾತಿ ನಿಯಮಗಳಲ್ಲಿ ಕೆಲವೊಂದು ತೊಡಕಿರುವುದರಿಂದ ನಗರದಲ್ಲಿ 60 ಪೌರ ಕಾರ್ಮಿಕರ ಕೊರತೆ ಉಂಟಾಗಿದೆ. ಸದ್ಯ ಉಡುಪಿಯಲ್ಲಿ 180 ಪೌರ ಕಾರ್ಮಿಕರಿದ್ದು, ಕೊರತೆ ಇರುವ ಪೌರ ಕಾರ್ಮಿಕರ ನೇಮಕದ ಕುರಿತಂತೆ ಜಿಲ್ಲಾಧಿಕಾರಿ ಭರವಸೆ ನೀಡಿರುವುದಾಗಿ ಅವರು ತಿಳಿಸಿದರು.

ಪೌರ ಕಾರ್ಮಿಕರ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸ್ವೀಕರಿಸಿದ ಶಾಸಕರು, ಮುಂದಿನ ಜಿಲ್ಲಾ ಮಟ್ಟದ ರಾಜ್ಯೋತ್ಸವದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೌರ ಕಾರ್ಮಿಕರಿಗೆ ರಾಜ್ಯೋತ್ಸ ಪ್ರಶಸ್ತಿ ನೀಡುವುದಾಗಿ ತಿಳಿಸಿದರು.

ಇದೇ ವೇಳೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಸ್ವಚ್ಛತಾ ಸೇವೆ ಅಭಿಯಾನಕ್ಕೆ ಶಾಸಕ ರಘುಪತಿ ಭಟ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕನ್ನು ಸನ್ಮಾನಿಸಲಾಯಿತು.

ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್, ಉದ್ಯಮಿ ಮನೋಹರ್ ಶೆಟ್ಟಿ, ಕೆಎಂಸಿ ಆಸ್ಪತ್ರೆಯ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಶ್ಯಾಮ್‌ಸುಂದರ್, ಕಾರ್ಯಪಾಲ ಅಭಿಯಂತರ ಗಣೇಶ್, ಪರಿಸರ ಅಭಿಯಂತರ ರಾಘವೇಂದ್ರ ಉಪಸ್ಥಿತರಿದ್ದರು. ನಗರಸಭೆಯ ಆರೋಗ್ಯ ನಿರೀಕ್ಷಕ ಕರುಣಾಕರ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News