ಉಡುಪಿ: ಸೆ.24ರಿಂದ ‘ರಂಗತೇರು’ ನಾಟಕೋತ್ಸವ

Update: 2019-09-23 14:55 GMT

ಉಡುಪಿ, ಸೆ.23: ರಂಗಭೂಮಿ ಉಡುಪಿ ಹಾಗೂ ಶಿವಮೊಗ್ಗ ರಂಗಾಯಣದ ಜಂಟಿ ಆಶ್ರಯದಲ್ಲಿ ಮೂರು ದಿನಗಳ ರಂಗಾಯಣದ ‘ರಂಗತೇರು’ ನಾಟಕೋತ್ಸವ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಾಳೆ ಪ್ರಾರಂಭಗೊಳ್ಳಲಿದೆ ಎಂದು ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.24ರ ಮಂಗಳವಾರ ಸಂಜೆ 6:00ಗಂಟೆಗೆ ನಾಟಕೋತ್ಸವದ ಉದ್ಘಾಟನೆ ನಡೆಯಲಿದ್ದು, ಉದ್ಯಮಿ ಕೆ. ಉದಯಕುಮಾರ್ ಶೆಟ್ಟಿ, ಸಂಗೀತ ವಿದ್ವಾಂಸ ಟಿ.ರಂಗ ಪೈ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮೊದಲ ದಿನದಂದು ಪ್ರೊ.ಅರವಿಂದ ಮಾಲಗತ್ತಿ ಅವರ ಆತ್ಮಕಥೆಯನ್ನಾ ಧರಿಸಿದ ನಾಟಕ ‘ಗೌರ್ಮೆಂಟ್ ಬ್ರಾಹ್ಮಣ’ ರಂಗಕರ್ಮಿ ಡಾ. ಎಂ.ಗಣೇಶ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.

ಎರಡನೇ ದಿನವಾದ ಬುಧವಾರ ಸಂಜೆ 6ಕ್ಕೆ ‘ಇದಕ್ಕೆ ಕೊನೆ ಎಂದು... ?’ ನಾಟಕ ಮಣಿಪುರದ ಜಾಯ್ ಮೆಸ್ನಾಂ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಕೊನೆಯ ದಿನವಾದ ಸೆ.26 ಗುರುವಾರದಂದು ಸಂಸ್ಕೃತಿ ಚಿಂತಕ ಬನ್ನಂಜೆ ವಿನಯ ಆಚಾರ್ಯ ಸಮಾರೋಪ ಭಾಷಣ ಮಾಡಲಿದ್ದು, ಬಳಿಕ ಬಾದಲ್ ಸರ್ಕಾರ್ ವಿರಚಿತ ಬಂಗಾಳಿ ಮೂಲದ ‘ಮೆರವಣಿಗೆ’ ನಾಟಕ ಪ್ರದರ್ಶನಗೊಳ್ಳಲಿದೆ. ಪಿ.ಗಂಗಾಧರ ಸ್ವಾಮಿ ಇದರ ನಿರ್ದೇಶಕರಾಗಿದ್ದಾರೆ ಎಂದು ಪ್ರದೀಪ್‌ಚಂದ್ರ ಕುತ್ಪಾಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷ ನಂದಕುಮಾರ್ ಎಂ, ಜೊತೆ ಕಾರ್ಯದರ್ಶಿ ರವಿರಾಜ್ ಎಚ್.ಪಿ., ಭಾಸ್ಕರರಾವ್ ಕಿದಿಯೂರು, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ಹಾಗೂ ಸದಸ್ಯ ಶ್ರೀಪಾದ ಹೆಗಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News