ಮಂಗಳೂರು: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ; ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

Update: 2019-09-23 15:20 GMT

ಮಂಗಳೂರು, ಸೆ.23: ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ, ಆಕೆ ಗರ್ಭಿಣಿಯಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಶಾರದಾನಗರ ನಿವಾಸಿ ಸಂತೋಷ್ (34)ಗೆ 10ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ವಿಧಿಸಿ, 2ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ವಿಶೇಷ ನ್ಯಾಯಾಲಯ (ಪೋಕ್ಸೋ) ಸೋಮವಾರ ತೀರ್ಪು ನೀಡಿದೆ.

ಪ್ರಕರಣ ವಿವರ: 2014ರ ಪ್ರಕರಣ ಇದಾಗಿದ್ದು, ಅಪ್ರಾಪ್ತ ಬಾಲಕಿಯು ಅಂಗಡಿಗೆ ಹೋಗುವಾಗ ಸ್ಥಳೀಯ ಮೈದಾನದಲ್ಲಿ ವಾಲಿಬಾಲ್ ಆಟ ಆಡುತ್ತಿದ್ದ ಚಾಲಕ ವೃತ್ತಿಯ ಸಂತೋಷ್ ಎಂಬಾತನ ಪರಿಚಯವಾಗಿದೆ. ಸಂತೋಷ್ ವಿವಾಹಿತನಾಗಿದ್ದು, ಜುಲೈ ತಿಂಗಳಲ್ಲಿ ಅಲ್ಲಿನ ಒಂದು ಗುಡ್ಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿ, ಯಾರಿಗಾದರೂ ಹೇಳಿದರೆ ಅಪಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಬಳಿಕ ಪ್ರತಿ ರವಿವಾರ ಆಕೆಯನ್ನು ಅದೇ ಪ್ರದೇಶಕ್ಕೆ ಬರಲು ಹೇಳಿ ಅತ್ಯಾಚಾರ ನಡೆಸಿದ್ದ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದು, 2015ರ ಜಲೈ 258ರಂದು ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆಸ್ಪತ್ರೆಯವರಿಂದ ಪೊಲೀಸರಿಗೆ ಮಾಹಿತಿ ತಿಳಿದು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತಾರೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಕೆ.ಯು. ಬೆಳ್ಳಿಯಪ್ಪ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಡಿಎನ್‌ಎ ವರದಿ ಪಾಸಿಟಿವ್ ಬಂದು ಆರೋಪಿ ವಿರುದ್ಧ ಬಲವಾದ ಸಾಕ್ಷಿಯಾಗಿತ್ತು.

ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ವಿಶೇಷ ನ್ಯಾಯಾಲಯ (ಪೋಕ್ಸೋ)ದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ ಪ್ರಕರಣದ ವಿಚಾರಣೆ ನಡೆಸಿದ್ದಾರೆ. 13 ಸಾಕ್ಷಿ ಮತ್ತು 19 ದಾಖಲೆಗಳನ್ನು ಸಾಕ್ಷಗಳಾಗಿ ಪರಿಗಣಿಸಿದ್ದಾರೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 376 ಮತ್ತು ಕಲಂ 6ರ ಪೋಕ್ಸೋ ಕಾಯ್ದೆಯಡಿ ಅಪರಾಧಿಗೆ 10 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ದಂಡದಲ್ಲಿ 7,500 ರೂ. ಸಂತ್ರಸ್ತ ಬಾಲಕಿಗೆ ನೀಡಬೇಕು ಹಾಗೂ ಸಿಆರ್‌ಪಿಸಿ ಸೆಕ್ಷನ್ 357(ಎ) ಪ್ರಕಾರ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಅರ್ಹರೆಂದು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಸರಕಾರಿ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News