ಉಡುಪಿ: 26ಕ್ಕೆ ದಲಿತರ ಪ್ರತಿಭಟನಾ ಧರಣಿ

Update: 2019-09-23 15:44 GMT

ಉಡುಪಿ, ಸೆ.23: ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ಮತ್ತು ನಮ್ಮ ಭೂಮಿ ನಮ್ಮ ಹಕ್ಕು ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆ.26ರಂದು ರಾಜ್ಯಾದ್ಯಂತ ನಡೆಯುವ ದಲಿತರ ಪ್ರತಿಭಟನಾ ಧರಣಿಯನ್ನು ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕರಾದ ಟಿ.ಮಂಜುನಾಥ ಗಿಳಿಯಾರು ಮತ್ತು ವಾಸುದೇವ ಮುದೂರು ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದು ಆರು ದಶಕಗಳೇ ಕಳೆದರೂ ಇಂದಿಗೂ ದಲಿತರ ತಲೆಯ ಮೇಲೊಂದು ಸೂರು ಇಲ್ಲದೆ, ಉಳಲು ತುಂಡು ಭೂಮಿ ಇಲ್ಲದೆ, ಕೊನೆಗೆ ತುತ್ತು ಅನ್ನಕ್ಕೂ ಪರದಾಡುವ ದೀನಸ್ಥಿತಿ ಇದೆ. ಭೂ ಪರಬಾರೆ ನಿಷೇಧ ಜಾರಿಯಲ್ಲಿದ್ದರೂ, ಜಿಲ್ಲಾಡಳಿತ ದಲಿತರಿಗೆ ಅವರ ಭೂಮಿಯ ಹಕ್ಕಿನಿಂದಲೂ ವಂಚಿತರನ್ನಾಗಿ ಮಾಡುತ್ತಿದೆ ಎಂದವರು ದೂರಿದ್ದಾರೆ.

ಜಿಲ್ಲೆಯಲ್ಲಿರುವ ಸರಕಾರಿ ಜಮೀನುಗಳು ಅಕ್ರಮ-ಸಕ್ರಮ ಸಮಿತಿಗಳ ಅಕ್ರಮ ವ್ಯವಹಾರಗಳಿಂದ ಉಳ್ಳವರಿಗೇ ಹಂಚಲ್ಪಡುತ್ತಿವೆ. ದಲಿತರು ಇಂದೂ ಭೂ ಹೀನರಾಗಿದ್ದಾರೆ. ದಲಿತರ ಮೇಲಿನ ಅನ್ಯಾಯ, ದಮನ ದೌರ್ಜನ್ಯ ಪ್ರತಿನಿತ್ಯ ಹೆಚ್ಚುತ್ತಲೇ ಇದೆ, ಅಸ್ಪಶ್ಯತೆ ಆಚರಣೆ ಮುನ್ನಡೆ ಸಾಧಿಸಿದೆ.ಒಟ್ಟಾರೆ ದಲಿತರು ತಮ್ಮ ಘನತೆಯ ಬದುಕಿನ ಹಕ್ಕಿನಿಂದಲೇ ವಂಚಿಸಲ್ಪಡುತ್ತಿದ್ದಾರೆ.

ಇಂತಹ ದಲಿತ ವಿರೋಧಿ ಆಡಳಿತದ ಆಷಾಢಭೂತಿತನವನ್ನು ಬಯಲು ಗೊಳಿಸಲು ಹಾಗೂ ದಲಿತರ ನ್ಯಾಯಬದ್ಧ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಂಡಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News