ಕೋಟ ಉಸ್ತುವಾರಿ ಚರ್ಚೆಗೆ ಇತಿಶ್ರೀ ಹಾಡಿ: ಬಿಜೆಪಿ

Update: 2019-09-23 15:46 GMT

ಉಡುಪಿ, ಸೆ.23: ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಗ್ಗೆ ಪಕ್ಷ ಹಾಗೂ ಕಾರ್ಯಕರ್ತರಿಗೆ ಅಪಾರ ಗೌರವವಿದ್ದು, ಕೋಟ ಉಸ್ತುವಾರಿ ಪಟ್ಟಕ್ಕೆ ಸಂಬಂಧಿಸಿ ನಡೆಯುತ್ತಿರುವ ಚರ್ಚೆಗೆ ಇತಿಶ್ರೀ ಹಾಡುವಂತೆ ಉಡುಪಿ ಜಿಲ್ಲಾ ಬಿಜೆಪಿ ಪ್ರಮುಖರು ಬಿಲ್ಲವ ಮುಖಂಡರಿಗೆ ಮನವಿ ಮಾಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಪ್ರಭಾಕರ ಪೂಜಾರಿ, ಕೋಟ ಅವರಿಗೆ ದ.ಕ. ಉಸ್ತುವಾರಿ ಕೊಟ್ಟಿರುವುದು ಪಕ್ಷದ ವರಿಷ್ಠರು ಹಾಗೂ ಇದು ಸಿಎಂ ಕೈಗೊಂಡಿರುವ ನಿರ್ಧಾರ. ಬಿಜೆಪಿ ಪಕ್ಷದಲ್ಲಿ ತತ್ವ ಸಿದ್ಧಾಂತವಿದ್ದು, ಅದಕ್ಕೆ ಬದ್ಧರಾಗಿರಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ಶ್ರೀನಿವಾಸ ಪೂಜಾರಿ ಬಗ್ಗೆ ಕೆಳಸ್ತರದ ಕಾರ್ಯಕರ್ತರಿಂದ ಉನ್ನತ ಮಟ್ಟದ ಪ್ರಮುಖರವರೆಗೆ ಎಲ್ಲರಿಗೂ ಅಪಾರ ಗೌರವವಿದ್ದು, ಈ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸುವಂತೆ ಮನವಿ ಮಾಡಿದರು.

ಬಿಲ್ಲವ ಸಮುದಾಯದ ಮುಖಂಡರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಉಸ್ತುವಾರಿ ಪಟ್ಟ ತಪ್ಪಿಸುವಲ್ಲಿ ಜಿಲ್ಲೆಯ ಶಾಸಕರ ಕೈವಾಡದ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದು, ಅವರಿಗೆ ಸ್ಪಷ್ಟತೆ ಇಲ್ಲ. ಪಕ್ಷದ ವರಿಷ್ಠರಿಗೆ ಪತ್ರ ಬರೆದಿರುವ ಬಗ್ಗೆ ಗೊಂದಲದ ಹೇಳಿಕೆ ಕೊಟ್ಟಿದ್ದಾರೆ ಹೊರತು, ಸಾಕ್ಷಗಳಿಲ್ಲ. ಪಕ್ಷದಲ್ಲಿ ಯಾವ ಸಮುದಾಯವನ್ನು ತೇಜೋವಧೆ ಮಾಡುವ ಕೆಲಸ ಮಾಡಿಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಬಸವರಾಜ ಬೊಮ್ಮಯಿ ಅವರನ್ನು ನಿಯೋಜಿಸಲಾಗಿದೆ. ಸದ್ಯ ಉಪಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಕಾರ್ಯ ಒತ್ತಡದ ಕಾರಣ ಜಿಲ್ಲೆಗೆ ಭೇಟಿ ಕೊಟ್ಟಿಲ್ಲ. ಜಿಲ್ಲೆಗೆ ಶೀಘ್ರವೇ ಭೇಟಿ ಕೊಟ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ವಿಶ್ವಾಸವಿದೆ. ಒಂದು ವೇಳೆ ಬೊಮ್ಮಾಯಿ ಅವರಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾದರೆ ಜಿಲ್ಲಾ ಉಸ್ತುವಾರಿ ಪಟ್ಟವನ್ನು ಕೋಟ ಅವರಿಗೆ ನೀಡುವಂತೆ ಆಗ್ರಹಿಸುವುದಾಗಿ ತಿಳಿಸಿದರು.

ಜಿಲ್ಲಾ ಕೋಶಾಧಿಕಾರಿ ರವಿ ಅಮೀನ್, ತಾಪಂ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ನಗರಸಭಾ ಸದಸ್ಯ ಗಿರೀಶ್ ಅಂಚನ್, ಜಯಂತಿ ಪೂಜಾರಿ, ವಕ್ತಾರ ಶಿವಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News