ನೀವು ಭಾರತದ ಪ್ರಧಾನಿ, ಟ್ರಂಪ್ ಪ್ರಚಾರಕನಲ್ಲ: ಕಾಂಗ್ರೆಸ್

Update: 2019-09-23 16:47 GMT

 ಹೊಸದಿಲ್ಲಿ, ಸೆ.23: ಅಮೆರಿಕದಲ್ಲಿ ರವಿವಾರ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ‘ಅಬ್‌ಕಿ ಬಾರ್ ಟ್ರಂಪ್ ಸರ್ಕಾರ್’ ಎಂದು ಪ್ರಧಾನಿ ಮೋದಿ ಘೋಷಿಸಿರುವುದನ್ನು ಟೀಕಿಸಿರುವ ಕಾಂಗ್ರೆಸ್, ನೀವು ಅಲ್ಲಿಗೆ ತೆರಳಿದ್ದು ಭಾರತದ ಪ್ರಧಾನಿಯಾಗಿ, ಟ್ರಂಪ್ ಅವರ ತಾರಾ ಪ್ರಚಾರಕನಾಗಿ ಅಲ್ಲ ಎಂದು ಹೇಳಿದೆ.

ಇನ್ನೊಂದು ದೇಶದ ಚುನಾವಣೆಯಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಇದುವರೆಗೆ ಭಾರತ ಪಾಲಿಸಿಕೊಂಡು ಬಂದಿದ್ದ ವಿದೇಶ ನೀತಿಯನ್ನು ಮೋದಿ ಉಲ್ಲಂಘಿಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಆನಂದ್ ಶರ್ಮ ರವಿವಾರ ರಾತ್ರಿ ಮಾಡಿರುವ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.

ನೀವು ಡೊನಾಲ್ಡ್ ಟ್ರಂಪ್ ಪರ ಪ್ರಚಾರ ನಡೆಸುವವರಂತೆ ಅಲ್ಲಿರುವ ಭಾರತೀಯ ಅಮೆರಿಕನ್ನರ ಮೇಲೆ ಪ್ರಭಾವ ಬೀರುವಂತೆ ವರ್ತಿಸಿದ್ದೀರಿ. ರಿಪಬ್ಲಿಕನ್ಸ್ ಮತ್ತು ಡೆಮಾಕ್ರಾಟ್‌ ಗಳಿಗೆ ಹೋಲಿಸಿದರೆ ಭಾರತ-ಅಮೆರಿಕ ನಡುವಿನ ಸಂಬಂಧ ಯಾವತ್ತೂ ಎರಡೂ ದೇಶಗಳಿಗೆ ಸಂಬಂಧಿಸಿದ ರೀತಿಯದ್ದಾಗಿದೆ . ಟ್ರಂಪ್ ಪರ ನೀವು ಪ್ರಚಾರ ಮಾಡಿರುವುದು ಭಾರತ ಮತ್ತು ಅಮೆರಿಕದ ಸಾರ್ವಭೌಮತೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಉಲ್ಲಂಘನೆಯಾಗಿದೆ ಎಂದು ಶರ್ಮ ಹೇಳಿದ್ದಾರೆ.

ಕಾಂಗ್ರೆಸ್ ಟೀಕೆಗೆ ಇದಿರೇಟು ನೀಡಿರುವ ಬಿಜೆಪಿಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ, ಹೌಡಿ ಮೋದಿಯ ಅದ್ಭುತ ಯಶಸ್ಸಿನಿಂದ ಕಾಂಗ್ರೆಸ್‌ನ ಕೆಲವರಿಗೆ ಹೊಟ್ಟೆಯುರಿ ಆಗಿರುವುದು ಸಹಜವಾಗಿದೆ. ಮೋದಿಯವರ ಹೇಳಿಕೆ 2016ರಲ್ಲಿ ಭಾರತೀಯ ಅಮೆರಿಕನ್ ಸಮುದಾಯದಲ್ಲಿ ಪ್ರಚಲಿತವಿದ್ದ ‘ಅಬ್‌ಕಿ ಬಾರ್ ಟ್ರಂಪ್ ಸರ್ಕಾರ್’ ಘೋಷಣೆಗೆ ಸಂಬಂಧಿಸಿದ್ದಾಗಿದೆ ಎಂದವರು ಟ್ವೀಟ್ ಮಾಡಿದ್ದಾರೆ.

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಟ್ರಂಪ್ ಪಾಲ್ಗೊಂಡಿರುವುದು 2020ರ ಅಧ್ಯಕ್ಷೀಯ ಚುನಾವಣೆ ಸಂದರ್ಭ ಟೆಕ್ಸಾಸ್‌ನಲ್ಲಿ ಭಾರತೀಯ ಅಮೆರಿಕನ್ನರ ಮತಗಳ ಮೇಲೆ ಪ್ರಭಾವ ಬೀರಲು ಟ್ರಂಪ್‌ಗೆ ನೆರವಾಗಲಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News