ಸರಕಾರಗಳ ನೀತಿಯನ್ನು ವಿರೋಧಿಸಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಸಂಘದಿಂದ ಪ್ರತಿಭಟನೆ

Update: 2019-09-23 17:40 GMT

ಬೆಳ್ತಂಗಡಿ: ಕೇಂದ್ರ ಹಾಗೂ ರಾಜ್ಯ ಸರಕಾರ ಕಾರ್ಮಿಕರ ಯಾವುದೇ ಬೇಡಿಕೆಗಳಿಗೆ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುಂತೆ ಆಗ್ರಹಿಸಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ, ಬಿ.ಎಂ.ಭಟ್ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕರ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಬಂಡವಾಳಶಾಹಿಗಳಿಗೆ ಆಧ್ಯತೆಯನ್ನು ನೀಡುತ್ತಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ನಾಶ ಮಾಡಲು ಹೊರಟಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ದೇಶದಲ್ಲಿ ಬದಲಾವಣೆ ಆಗುವುದಾದರೆ ಆಗಲಿ. ಬಂಡವಾಳಶಾಹಿಗಳ ಪ್ರಭುತ್ವ ಬದಲು ಕಾರ್ಮಿಕರ ಪ್ರಭುತ್ವ ಬರಲಿ. ಕಾರ್ಮಿಕರಿಗೆ ಹೊಸ ಕಾನೂನಿನಿಂದ ಅನ್ಯಾಯ ಆಗುತ್ತಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆಯಿಂದ ಆಗುತ್ತಿಲ್ಲ. ಇದು ಬಡವರಿಗೆ ಮಾಡುವ ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು. ಕಾರ್ಮಿಕರ ಹಿತರಕ್ಷಣೆ ಮಾಡಬೇಕಾದ ಸರಕಾರ ಅನ್ಯಾಯ ಮಾಡಲು ಹೊರಟರೆ ಯಾವುದೇ ರೀತಿಯ ಹೋರಾಟಕ್ಕೂ ಬದ್ದ ಎಂದರು. 

ನೋಂದಾಯಿತ ಕಟ್ಟಡ ಕಾರ್ಮಿಕರನ್ನು ಅವಮಾನಿಸಿ, ಅವರನ್ನು ಬೆದರಿಸಿ ನೋಂದಾವಣೆ ರದ್ದು ಪಡಿಸುವ ಕಲ್ಯಾಣ ಮಂಡಳಿಯ ದುರ್ನೀತಿ ಬದಲಾಗಬೇಕು. ಕಳೆದ ಒಂದು ವರ್ಷದಿಂದ ಅರ್ಜಿ ಸಲ್ಲಿಸಿದ ಕಾರ್ಮಿಕರಿಗೆ ಯಾವ ಸವಲತ್ತುಗಳು ಬಂದಿಲ್ಲ. ತಕ್ಷಣ ಬಿಡುಗಡೆಗೊಳಿಸಬೇಕು. ಸವಲತ್ತು ಪಡೆಯಲು ಇರುವ ನಿರ್ಬಂಧವನ್ನು ಸಡಿಲಗೊಳಿಸಬೇಕು. ಆನ್‍ಲೈನ್ ಕಡ್ಡಾಯ ಬೇಡ. ನೋಂದಾಯಿತ ಕಾರ್ಮಿಕರಿಗೆ ತಕ್ಷಣ ಗುರುತುಪತ್ರ ನೀಡಬೇಕು ಮೊದಲಾದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. 

ಪತ್ರಿಭಟನೆಯಲ್ಲಿ ಸಿಐಟಿಯು ಅಧ್ಯಕ್ಷ ಮಂಜುನಾಥ್, ಕಟ್ಟಡ ಮಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಕುದ್ಯಾಡಿ, ಮುಖಂಡರಾದ ನೆಬಿಸ, ದೇವಕಿ, ಜಯರಾಮ ಮಯ್ಯ, ಧನಂಜಯ ಪಟ್ರಮೆ, ರಾಮಚಂದ್ರ, ಪುಷ್ಪಾ, ಯುವರಾಜ್ ಮೊದಲಾದವರು ನೇತೃತ್ವ ವಹಿಸಿದ್ದರು. 

ಬಳಿಕ ಬೆಳ್ತಂಗಡಿ ತಹಸೀಲ್ದಾರರ ಮೂಲಕ ರಾಜ್ಯ ಕಟ್ಟಡ ಮತ್ತು ಇತರರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News