ಇಸ್ರೇಲ್: ನೆತನ್ಯಾಹು ಎದುರಾಳಿಗೆ ಬೆಂಬಲ ನೀಡಲು ಅರಬ್ ಪಕ್ಷಗಳ ನಿರ್ಧಾರ

Update: 2019-09-23 18:15 GMT

ಜೆರುಸಲೇಮ್, ಸೆ. 23: ನೂತನ ಸರಕಾರ ರಚಿಸಲು ಪ್ರಧಾನಿ ಬೆಂಜಮಿನ್ ನೆತನ್ಯಾಹುರ ಬಲಪಂಥೀಯ ಒಕ್ಕೂಟದ ವಿರುದ್ಧ ಸೆಣಸುತ್ತಿರುವ ಬೆನ್ನಿ ಗಾಂಟ್ಝ್‌ರ ಮಧ್ಯ-ಎಡಪಂಥೀಯ ಪಕ್ಷಗಳ ಒಕ್ಕೂಟಕ್ಕೆ ಬೆಂಬಲ ನೀಡಲು ಇಸ್ರೇಲ್‌ನ ಅರಬ್ ಪಕ್ಷಗಳ ಒಕ್ಕೂಟ ಜಾಯಿಂಟ್ ಲಿಸ್ಟ್ ರವಿವಾರ ಮುಂದಾಗಿದೆ.

ಮಂಗಳವಾರ ಇಸ್ರೇಲ್ ಸಂಸತ್ತಿಗೆ ನಡೆದ ಚುನಾವಣೆಯ ಬಹುತೇಕ ಎಲ್ಲ ಫಲಿತಾಂಶ ಹೊರಬಿದ್ದಿದ್ದು, ಅತಂತ್ರ ಸಂಸತ್ತು ನಿರ್ಮಾಣವಾಗಿದೆ. ಗಾಂಟ್ಝ್ ಆಗಲಿ, ನೆತನ್ಯಾಹು ಆಗಲಿ ಸಂಸತ್ತಿನಲ್ಲಿ ಬಹುಮತ  ಪಡೆಯುವಲ್ಲಿ  ಯಶಸ್ವಿಯಾಗಿಲ್ಲ. ಹಾಗಾಗಿ, ಯಾವುದೇ ಅಭ್ಯರ್ಥಿಗೆ ಬೆಂಬಲ ನೀಡದಿರುವ ತನ್ನ ಸಾಮಾನ್ಯ ನೀತಿಯಲ್ಲಿ ಮಾರ್ಪಾಡು ಮಾಡಲು ಅರಬ್ ಪಕ್ಷಗಳ ಒಕ್ಕೂಟ ಮುಂದಾಗಿದೆ. ಹಾಗಾಗಿ, ಸರಕಾರ ರಚಿಸುವಂತೆ ಬೆನ್ನಿ ಗಾಂಟ್ಝ್‌ರನ್ನು ಅಧ್ಯಕ್ಷ ರೂವೆನ್ ರಿವ್ಲಿನ್ ಆಹ್ವಾನಿಸುವ ಸಾಧ್ಯತೆಗಳಿವೆ.

ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ, ಯಾರು ಸರಕಾರ ರಚಿಸಬೇಕು ಎಂಬ ಬಗ್ಗೆ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸುವ ಪ್ರಕ್ರಿಯೆಯನ್ನು ರಿವ್ಲಿನ್ ರವಿವಾರ ಆರಂಭಿಸಿದ್ದಾರೆ.

120 ಸದಸ್ಯ ಬಲದ ಸಂಸತ್ತಿನಲ್ಲಿ ಅರಬ್ ಪಕ್ಷಗಳು 13 ಸ್ಥಾನಗಳನ್ನು ಗೆದ್ದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News